ಸೋಮವಾರಪೇಟೆ, ಜ. ೬: ಸಮೀಪದ ಗೋಣಿಮರೂರು ಗ್ರಾಮದಲ್ಲಿ ಅಂಬೇಡ್ಕರ್ ಚಿಂತಕರ ಬಳಗದ ಹೋಬಳಿ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನೂತನ ಕಚೇರಿಯನ್ನು ಜಿಲ್ಲಾ ಪಂಚಾಯಿತಿ ಮಾಜೀ ಅಧ್ಯಕ್ಷ ವಿ.ಎಂ. ವಿಜಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರಪಂಚ ದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ ಕೀರ್ತಿಗೆ ಭಾಜನರಾಗಿರುವ ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿವೆ ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರು ಸಮಾಜದ ದೀನ ದಲಿತರ ಧ್ವನಿಯಾಗಿದ್ದು, ತಳಮಟ್ಟದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವಿರತ ಶ್ರಮಿಸಿದರು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಪ್ರೇರಿಪಿಸಿದ ಮಹಾನ್ ನಾಯಕ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕರ ಬಳಗದ ಅಧ್ಯಕ್ಷ ಹೆಚ್.ಸಿ. ರಾಮಕೃಷ್ಣ ಮಾತನಾಡಿ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ ಗೋಣಿಮರೂರಿನಲ್ಲಿ ಅಂಬೇಡ್ಕರ್ ಸಮುದಾಯ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ರೂ. ೭೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶಾಸಕರು, ಎಂಎಲ್ಸಿ, ಸಂಸದರ ಅನುದಾನ ಬಳಸಿಕೊಂಡು ೧ ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಗಣಗೂರು ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ೮ ಮಂದಿ ಸದಸ್ಯರು ಹಾಗೂ ಆಲೂರು ಸಿದ್ದಾಪುರ ಗ್ರಾ.ಪಂ.ಗೆ ಆಯ್ಕೆಯಾದ ಓರ್ವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಉಪಾಧ್ಯಕ್ಷ ದುಷ್ಯಂತ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.