ಶತ ಶತಮಾನಗಳಲ್ಲಿ ಕಂಡು ಕೇಳರಿಯದ ಮಾರಣಾಂತಿಕ ಕೊರೊನಾ ವೈರಾಣು ಸಾಂಕ್ರಾಮಿಕ, ಮಾರಣಾಂತಿಕ ರೋಗ ಇಡೀ ಮಾನವ ಕುಲವನ್ನೇ ೨೦೨೦ ರ ಮಾರ್ಚ್ ಬಳಿಕ ಹಿಂಡಿ ಹಿಪ್ಪೆಯಾಗಿಸಿತು. ಚೀನಾದ ವೂಹಾನ್ನಿಂದ ಹೆಜ್ಜೆಯಿರಿಸಿ ಇಡೀ ವಿಶ್ವವನ್ನೇ ಆವರಿಸಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಮಾಯಕ ಜೀವಿಗಳನ್ನು ಬಲಿ ತೆಗೆದುಕೊಳ್ಳಲಾರಂಭಿಸಿತು. ಮುಕ್ತವಾಗಿ ಓಡಾಡುತಿದ್ದ ಯುವಕ-ಯುವತಿಯರು, ಮಹಿಳೆಯರು, ಪುರುಷರು ಹಿರಿಯರೆನ್ನದೆ ಎಲ್ಲರನ್ನೂ ಮನೆಯಲ್ಲಿಯೇ ಬಂಧಿಯಾಗಿಸುವತ್ತ ದಾಪುಗಾಲಿರಿಸಿತು. ಒಂದೆಡೆ ಓದು, ಮತ್ತೊಂದೆಡೆ ಆಟಗಳಲ್ಲಿ ತೊಡಗಿಸಿಕೊಂಡು ಗುಬ್ಬಚ್ಚಿಗಳಂತೆ ಹಾರಾಡುತ್ತಿದ್ದ ಮುಗ್ಧ ಮಕ್ಕಳನ್ನು ಈ ಪೆಡಂಭೂತ ಮಕಾಡೆ ಮಲಗಿಸಿಬಿಟ್ಟಿತು.ಸಾಮಾನ್ಯ ವ್ಯಕ್ತಿ ಅಥವಾ ಕೋಟ್ಯಾಧಿಪತಿಯೆನ್ನದೆ ತನ್ನ ಕಬಂಧ ಬಾಹು ಚಾಚಿ ನಜ್ಜುಗುಜ್ಜು ಮಾಡತೊಡಗಿತು. ಈ ಸಂದರ್ಭ ವಿಶ್ವದ ಹಿರಿಯಣ್ಣ ಅಮೇರಿಕಾ ಕೂಡ ನಲುಗಿ ಹೋಗುವಂತೆ ಮಾಡಿತು. ಇದೀಗ ಇಂಗ್ಲೆAಡ್ನಲ್ಲಿ ರೂಪಾಂತರಿಯಾಗಿ ಈ ವೈರಾಣು ದ್ವಿತೀಯ ಹಂತದಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.

ಭಾರತದಲ್ಲಿ ದೇಶವನ್ನಾಳುತ್ತಿರುವವರ, ಆಯಾ ರಾಜ್ಯವನ್ನಾಳುತ್ತಿರುವವರ ಸಕಾಲಿಕ ಸಮಯ ಪ್ರಜ್ಞೆಯಿಂದ ಅನೇಕ ನಿಯಂತ್ರಣಗಳು, ಮುನ್ನೆಚ್ಚರಿಕೆ, ತುರ್ತು ಚಿಕಿತ್ಸಾ ವಿಧಾನಗಳ ವ್ಯವಸ್ಥೆಯಿಂದ ದೇಶ ಇದೀಗ ನಿಧಾನವಾಗಿ ಮರುಚೇತನದತ್ತ ಮುನ್ನುಗ್ಗುತ್ತಿದೆ. ಅಂದರೆ, ಆಡಳಿತಾತ್ಮಕವಾಗಿ ಎಲ್ಲ ಸಮರ್ಪಕವಾಗಿದೆ ಎನ್ನುವ ಹೊಗಳಿಕೆಯಲ್ಲ. ಇಂತಹ ಅದೃಶ್ಯ ರೂಪದ ಪ್ರಾಕೃತಿಕ ಆಘಾತವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಮ್ಮನ್ನಾಳುವವರು ಧೈರ್ಯದಿಂದ ಎದುರಿಸಿ ಪ್ರಜೆಗಳನ್ನು ಕಾಪಾಡಲು ಪರಿಶ್ರಮಿಸಿದ್ದಾರೆ ಎನ್ನುವದು ಅತಿಶಯೋಕ್ತಿಯಲ್ಲ. ಕೊಡಗು ಜಿಲ್ಲಾ ಮಟ್ಟದಲ್ಲಿಯೂ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಎಲ್ಲ ಧರ್ಮಗಳ ಸ್ವಯಂ ಸೇವಕರು, ಉದಾರಿಗಳು, ಮಠಾಧೀಶರುಗಳು, ಸಮಯ ಪ್ರಜ್ಞೆಯೊಂದಿಗೆ ಸಾಕಷ್ಟು ಸೇವೆಗೈದಿದ್ದಾರೆ. ವೈದ್ಯಕೀಯ ಸಿಬ್ಬಂದಿ, ವೈದ್ಯರುಗಳು ಶಕ್ತಿ ಮೀರಿ ಪರಿಶ್ರಮವಹಿಸಿದ್ದಾರೆ. ಎಂದೂ ಕಂಡು ಕೇಳರಿಯದ ಇಂತಹ ಆಘಾತವನ್ನು ಎದುರಿಸುವಾಗ ತಪ್ಪುಗಳಾಗುವದು ಸಹಜ. ಆದರೆ, ಅದು ದುರುದ್ದೇಶಪೂರಿತವಾದುದಲ್ಲ. ಪ್ರಯೋಗಾತ್ಮಕ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವಾಗ ಆಗುವಂತಹ ಸನ್ನಿವೇಶಗಳಷ್ಟೆ.

ಆದರೆ, ಅನೇಕ ಸಂದರ್ಭ ಜನರನ್ನು ಭಯಭೀತಿಗೊಳಿಸಿ ಆತಂಕಕ್ಕೆ ತಳ್ಳುವಂತಹ ಸುದ್ದಿಗಳು ಬಿತ್ತರಗೊಳ್ಳುತ್ತವೆ. ಇದರಿಂದಾಗಿ ದುರ್ಬಲ ಮನಸ್ಸಿನವರಿಗೆ ಮಾನಸಿಕ ಆಘಾತವುಂಟಾಗಿ ಅನಾರೋಗ್ಯಕ್ಕೆ ಕಾರಣವಾಗಿ ಸಾವು ಸಂಭವಿಸಿರುವ ಅನೇಕ ಪ್ರಕರಣಗಳು ನಡೆಯುತ್ತಿವೆ. ಈ ಎಲ್ಲಕ್ಕೂ ಕೊನೆಗೆ ಕೊರೊನಾ ಸಾವು ಎಂದೇ ಭಯಪಡಿಸಿ ಹೆಸರಿಸಲಾಗುತ್ತಿದೆ. ಇತರ ಯಾವದೇ ಕಾಯಿಲೆಗಳಿಗೆ ಚಿಕಿತ್ಸೆಗೆ ತೆರಳಿದರೂ ಕೋವಿಡ್ ಪರೀಕ್ಷೆಯಿಂದಾಗಿ ನೈಜ ಇತರ ಕಾಯಿಲೆಗೆ ಸಮರ್ಪಕ ಚಿಕಿತ್ಸೆ ಸಿಗದೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚು ಮಾಡಿಯೂ ಜೀವ ಉಳಿಯದೆ ಇಡೀ ಕುಟುಂಬಗಳು ಸಂಕಷ್ಟದಿAದ ನರಳುತ್ತಿವೆ. ಜನರನ್ನು ಭಯ ಭೀತಿಗೊಳಿಸುವ ಪ್ರಚಾರಗಳು ಕೊನೆಗೊಳ್ಳಬೇಕು. ಚಿಕಿತ್ಸಾ ವಿಧಾನಗಳೂ ಬದಲಾಗಬೇಕು. ನೈಜ ರೋಗಕ್ಕೆ ಮೊದಲು ತುರ್ತು ಚಿಕಿತ್ಸೆ ನೀಡಬೇಕು. ನೈತಿಕ ಧೈರ್ಯ ತುಂಬುವ ಮನೋಸ್ಥೆöÊರ್ಯ ನೀಡುವ ಕಾರ್ಯ ಮೊದಲು ನಡೆಯಬೇಕಿದೆ. ಏನೆಲ್ಲ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕೋ ಅದನ್ನು ಜನರೂ ಕೂಡ ಆಡಳಿತಾತ್ಮಕ ಆದೇಶಗಳು ಹೊರಬಿದ್ದಾಗ ಕಡ್ಡಾಯವಾಗಿ ಪಾಲಿಸುವದು ಅಗತ್ಯವಿದೆ. ಸೋಪುಗಳ ಮೂಲಕ ಕರ-ಮುಖ ಶುದ್ಧಿ, ಕೈಗಳಿಗೆ ಸ್ಯಾನಿಟೈಸಿಂಗ್, ಸಾಮಾಜಿಕ ಅಂತರ ಕಾಪಾಡುವಿಕೆಯನ್ನು, ಜೊತೆಗೆ ಕರಿಮೆಣಸು, ತುಳಸಿ, ಅರಿಶಿಣ ಮೊದಲಾದವುಗಳ ಬಳಕೆ ಮೂಲಕ ಕಷಾಯದಂತಹ ಮನೆಮದ್ದು ಸೇವಿಸುವದನ್ನು ಕೂಡ ಕೊರೊನಾ ಪೂರ್ಣ ತೊಲಗುವವರೆಗೆ ಪಾಲಿಸುವದನ್ನು ಜನತೆಯು ಶಿಸ್ತ್ತುಬದ್ಧವಾಗಿ ಪರಿಪಾಲಿಸಿದರೆ ಖಂಡಿತ ಈ ರೋಗ ಹರಡುವಿಕೆ ಕ್ಷೀಣಗೊಳ್ಳುತ್ತದೆ.

ಈ ದಿಸೆಯಲ್ಲಿ ಹಳ್ಳಿಗಳಲ್ಲಿ ಸಾಮಾಜಿಕ ಸೇವಾ ಸಂಘ ಸಂಸ್ಥೆಗಳು ತಿಳುವಳಿಕೆ, ಜಾಗೃತಿ ಮೂಡಿಸುವ ಕಾರ್ಯಾಗಾರ ಮಾಡುವದೊಳಿತು. ಸಾಧ್ಯವಾದಷ್ಟು ಸ್ಯಾನಿಟೈಸಿಂಗ್ ಹಾಗೂ ಮಾಸ್ಕ್ಗಳನ್ನು ಉದಾರಿಗಳ ನೆರವಿನಿಂದ ಉಚಿತವಾಗಿ ವಿತರಿಸಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಆದರೆ, ಅಮಾಯಕ ಜನರನ್ನು ಇಲ್ಲ ಸಲ್ಲದ ಪ್ರಚಾರಗಳ ಮೂಲಕ ಭಯ ಭೀತಿಗೊಳಿಸಿ ಮಹಿಳೆಯರು, ಮಕ್ಕಳನ್ನೂ ಮಾನಸಿಕ ದೌರ್ಬಲ್ಯಕ್ಕೆ ತಳ್ಳುವ ಕೆಲಸವನ್ನು ಇನ್ನೂ ಯಾರಾದರೂ ಮುಂದುವರಿಸಿದರೆ ಅಂತಹವರು ಸಾಮಾಜಿಕ ದೌರ್ಜನ್ಯಕಾರರಾಗುತ್ತಾರೆ, ಬದಲಿಗೆ ಇಂತಹವರು ಇನ್ನಾದರೂ ಸಾಮಾಜಿಕ ಹರಿಕಾರರಾಗಲಿ ಎಂದು “ಶಕ್ತಿ” ಈ ಮೂಲಕ ಆಶಿಸುತ್ತದೆ.

ಒಂದAತೂ ನೆನಪಿನಲ್ಲಿಡೋಣ: ಮಾನವ ಖಂಡಿತ ಸರ್ವತಂತ್ರ ಸ್ವತಂತ್ರನಲ್ಲ. ಹೀಗಿರುವಾಗ ನಮ್ಮ ದೈಹಿಕ ಶಕ್ತಿಯನ್ನೂ ಮೀರಿದ ಜಗತ್ತಿನ ಮೂಲ ಶಕ್ತಿಯನ್ನು ನಾವು ಹೆಸರಿನಿಂದ ಕರೆಯಬಹುದು, ಸಂಗೀತ, ಸ್ತೋತ್ರಗಳಿಂದ ಸ್ತುತಿಸಬಹುದು, ಅಂತರಾತ್ಮನಲ್ಲಿಯೇ ಧ್ಯಾನದಿಂದ ಅಗೋಚರವಾಗಿ ಅರಿವು ಮೂಡಿಸಿಕೊಳ್ಳಬಹುದು- ದೀಪ ಬೆಳಗಿಸಿ ಆ ಜ್ಯೋತಿಯನ್ನು ಕೇಂದ್ರೀಕೃತಗೊಳಿಸಿ ಮನದಲ್ಲಿ ತುಂಬಿಕೊಳ್ಳಬಹುದು, ಪ್ರತ್ಯಕ್ಷ ಬೆಳಕಿನ ಸೂರ್ಯ ಕಿರಣಗಳನ್ನು ಆವಾಹಿಸಿಕೊಂಡು ಮರು ಚೈತನ್ಯ ಪಡೆಯಬಹುದು, ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪ್ರಾರ್ಥಿಸಬಹುದು, ಭಜನೆಗಳ ಮೂಲಕ ಸ್ತುತಿಸಬಹುದು, ಸಮರ್ಥ ಗುರುಗಳು, ಮಾರ್ಗದರ್ಶಕರ ಸಂದೇಶಗಳನ್ನು ಕೇಳಿ ಅನುಸರಿಸಬಹುದು-ಇಂತಹ ಸತ್ವಪೂರ್ಣ ಆಚರಣೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ದಿನ-ರಾತ್ರಿಯ ೨೪ ಗಂಟೆಯಲ್ಲಿ ಕೇವಲ ೧೫ ನಿಮಿಷವಾದರೂ ಈ ರೀತಿ ತೊಡಗಿಸಿಕೊಂಡರೆ ನಮ್ಮ ಆಂತರ್ಯದಲ್ಲಿಯೇ ನಮಗೆ ಭವಿಷ್ಯದ ಮಾರ್ಗದರ್ಶನ ಸಿಗುತ್ತಿರುತ್ತದೆ. ಆ ಮೂಲಕ ಕೊರೊನಾ ಮಾತ್ರವಲ್ಲ ಎಂತಹ ದುಶ್ಶಕ್ತಿಗಳನ್ನೂ, ಸಂಕಷ್ಟಗಳನ್ನೂ ಎದುರಿಸಲು ನಮಗೆ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆ ಮೂಲಕ ನಾವು ದಿನವೂ ಮರು ಚೈತನ್ಯ ಪಡೆಯುತ್ತಿರಲು ಖಂಡಿತ ಸಾಧ್ಯವಾಗಬಲ್ಲುದು. ಜಡತ್ವದಿಂದ ಹೊರ ಬಂದು ನಿತ್ಯವೂ ಹೊಸ ಹುರುಪಿನೊಂದಿಗೆ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಪೂರಕವಾಗಬಲ್ಲುದು. ನೂತನ ವರ್ಷದ ಸಂಭ್ರಮದೊAದಿಗೆ ಈ ದಿಸೆಯಲ್ಲಿಯೂ ಹೊಸ ವರ್ಷದ ಈ ದಿನ ನಾವು ಮನಃಪೂರ್ವಕ ಚಿಂತನೆ ಹರಿಸುವದರೊಂದಿಗೆ ಮಾನಸಿಕ, ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳೋಣ. ಅನವಶ್ಯಕ ಕೋಪ ತಾಪ, ಕಳವಳ, ದ್ವೇಷಾಸೂಯೆಗಳನ್ನು ದೂರಮಾಡಿ ಸಮತೋಲನದ ಹಾದಿಯಲ್ಲಿ ಸಾಗೋಣ. ಸುಖ-ದುಃಖಗಳನ್ನು ಸಮಾನಾಂತರವಾಗಿ ಸ್ವೀಕರಿಸಿ ಸಮಚಿತ್ತತೆಯಿಂದ ಪದಕ್ರಮಿಸೋಣ.

-ಜಿ.ರಾಜೇಂದ್ರ, ಪ್ರಧಾನ ಸಂಪಾದಕ