ಸೋಮವಾರಪೇಟೆ, ಜ. ೧: ಕೊಡಗಿನ ಗ್ರಾಮ ಪಂಚಾಯಿತಿಗಳ ಚುನಾವಣಾ ಅಖಾಡದ ಅಂತಿಮ ಫಲಿತಾಂಶದಲ್ಲಿ ಜಿಲ್ಲೆಯ ಮೂರೂ ತಾಲೂಕುಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿರುವದು ಬಹುತೇಕ ಸ್ಪಷ್ಟವಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ೪೦ ಗ್ರಾಮ ಪಂಚಾಯಿತಿಗಳ ೪೮೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೨೮೦ಕ್ಕೂ ಅಧಿಕ ಮಂದಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಮಡಿಕೇರಿಯ ೨೬ ಗ್ರಾಮ ಪಂಚಾಯಿತಿಗಳ ೨೯೧ ಸ್ಥಾನಗಳ ಪೈಕಿ ೧೬೫ ರಲ್ಲಿ ಬಿಜೆಪಿ ಕಾರ್ಯಕರ್ತರು ಜಯ ದಾಖಲಿಸಿದ್ದಾರೆ. ವೀರಾಜಪೇಟೆಯ ೩೫ ಗ್ರಾಮ ಪಂಚಾಯಿತಿಯ ೪೨೦ ಸ್ಥಾನಗಳ ಪೈಕಿ ೨೭೮ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿರುವ ಅಂಕಿ ಅಂಶಗಳು ಲಭ್ಯವಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ ೭೨೩ ಮಂದಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಆಡಳಿತಕ್ಕೆ ಕೊಡಗಿನ ಜನತೆ ಬೆಲೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರಗಳು ಕೈಗೊಂಡ ಪರಿಹಾರ ಕ್ರಮಗಳು, ಇದರ ಜೊತೆಯಲ್ಲೇ ನಡೆದ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ಶ್ರೀರಕ್ಷೆಯಾಗಿದೆ. ಇದರೊಂದಿಗೆ ನರೇಂದ್ರ ಮೋದಿಯಂತಹ ಉತ್ತಮ ಪ್ರಧಾನಿಯನ್ನು ನೀಡಿದ ಬಿಜೆಪಿ ಪಕ್ಷಕ್ಕೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಆಶೀರ್ವಾದ ಮಾಡಿದ್ದಾರೆ. ಜಿಲ್ಲೆಯಲ್ಲಿ ಶಾಸಕರುಗಳು ಕೈಗೊಂಡ ಜನಪರ ಸೇವೆ, ಅಭಿವೃದ್ಧಿ ಕಾರ್ಯಗಳು ಪಕ್ಷದ ಬಲವನ್ನು ವೃದ್ಧಿಸಿದೆ. ಯುವ ಮತದಾರರು ಬಿಜೆಪಿ ಪರ ಇರುವದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಭಿಪ್ರಾಯಿಸಿದ್ದಾರೆ.

ಇನ್ನು ಜಿಲ್ಲೆಯ ೧೦೧ ಗ್ರಾಮ ಪಂಚಾಯಿತಿಗಳ ಪೈಕಿ ೭೦ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಸ್ಪಷ್ಟ ಬಹುಮತ ಹೊಂದಿದ್ದಾರೆ. ನಾಲ್ಕೆöÊದು ಗ್ರಾಮ ಪಂಚಾಯಿತಿಗಳಲ್ಲಿ ಕೆಲವೇ ಸ್ಥಾನಗಳು ಕಡಿಮೆಯಾಗಿವೆ. ಸೋಮವಾರಪೇಟೆಯ ೪೦ ಗ್ರಾ.ಪಂ.ಗಳ ಪೈಕಿ ೨೩, ವೀರಾಜಪೇಟೆಯ ೩೫ ಗ್ರಾ.ಪಂ.ಗಳ ಪೈಕಿ ೩೦, ಮಡಿಕೇರಿಯ ೨೬ ಗ್ರಾ.ಪಂ.ಗಳ ಪೈಕಿ ೧೭ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಬಹುಮತ ಸಾಧಿಸಿದ್ದು, ಶೇ. ೭೦ಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಬಿಜೆಪಿ ಆಡಳಿತ ಹಿಡಿಯಲಿದೆ ಎಂದು ರಾಬಿನ್ ದೇವಯ್ಯ ಹೇಳಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವಿದ್ದು, ಮಡಿಕೇರಿ ಕ್ಷೇತ್ರದಲ್ಲಿ ೨೪೦ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೫೦ ಮಂದಿ ಸೇರಿದಂತೆ ೪೯೦ರ ಆಸುಪಾಸಿನಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿರುವ ಬಗ್ಗೆ ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ೧೭ ಗ್ರಾಮ ಪಂಚಾಯಿತಿ ಹಾಗೂ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ೧೮ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಅವಕಾಶ ಕಾಂಗ್ರೆಸ್ ಪಕ್ಷಕ್ಕಿದ್ದು, ೩೫ ರಿಂದ ೪೦ ಪಂಚಾಯಿತಿಗಳಲ್ಲಿ ಅಧಿಕಾರ ಸ್ಥಾಪಿಸುತ್ತೇವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ತಿಳಿಸಿದ್ದಾರೆ.

ಜೆಡಿಎಸ್ ಗಟ್ಟಿಯಾಗಿ ನೆಲೆಯೂರಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರು ಅತ್ಯಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೬೦ ರಿಂದ ೭೦ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿರುವ ಮಾಹಿತಿ ಇದ್ದು, ವೀರಾಜಪೇಟೆ ಕ್ಷೇತ್ರದಲ್ಲಿ ಭಾರೀ ಹಿನ್ನಡೆಯಾಗಿದೆ. ಪೊನ್ನಂಪೇಟೆ, ಗೋಣಿಕೊಪ್ಪ, ಶ್ರೀಮಂಗಲ, ಕುಟ್ಟ, ತಿತಿಮತಿ, ಬಾಳೆಲೆ ವ್ಯಾಪ್ತಿಯಲ್ಲಿ ಜೆಡಿಎಸ್ ಯಾವದೇ ಸಾಧನೆ ತೋರದಿರುವದು ಚುನಾವಣಾ ಫಲಿತಾಂಶದಿAದ ತಿಳಿದುಬಂದಿದೆ.

ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವತ್ತ ಗಮನ ಹರಿಸಲಾಗುವದು. ಹಲವಷ್ಟು ಕಡೆಗಳಲ್ಲಿ ಪಕ್ಷ ಬೆಂಬಲಿತರು ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ರಾಷ್ಟಿçÃಯ ಪಕ್ಷಗಳು ಹಣಬಲದಿಂದ ಚುನಾವಣೆ ಎದುರಿಸಿವೆ ಎಂದು ಮಡಿಕೇರಿ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಹೆಚ್.ಆರ್. ಸುರೇಶ್ ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲ ಸಿಗದವರು ಪಕ್ಷೇತರರಾಗಿ ನಿಂತು ಗೆಲುವು ಸಾಧಿಸಿದ್ದು, ಇದೀಗ ಗೆದ್ದ ನಂತರ ಪಕ್ಷದ ಮುಖಂಡರು ‘ಅವರು ನಮ್ಮವರೇ, ನಮ್ಮೊಂದಿಗೇ ಇದ್ದಾರೆ’ ಎಂದು ಲೆಕ್ಕಾಚಾರ ಮಾಡಿದ್ದಾರೆ. ಮೂರೂ ಪಕ್ಷಗಳ ಮುಖಂಡರು ತಮ್ಮದೇ ರೀತಿಯಲ್ಲಿ ಲೆಕ್ಕಾಚಾರ ಹಾಕಿಕೊಂಡಿದ್ದು, ಒಟ್ಟಾರೆಯಾಗಿ ಚುನಾವಣಾ ಫಲಿತಾಂಶ ಗಮನಿಸಿದರೆ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರು ಇತರ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿರುವದು ಸ್ಪಷ್ಟವಾಗಿದೆ.