ಸುಂಟಿಕೊಪ್ಪ, ಡಿ. ೩೦: ಸುಂಟಿಕೊಪ್ಪ ಪಟ್ಟಣದಲ್ಲಿ ರಾತ್ರಿವೇಳೆ ೭ ಕಡೆ ಸರಣಿ ಕಳ್ಳತನವಾಗಿದೆ.

ಮಾದಾಪುರ ರಸ್ತೆಯಲ್ಲಿನ ಶ್ರೀ ಕೋದಂಡರಾಮ ದೇವಾಲಯದ ಬೀಗ ಮುರಿದು ಒಳನುಗ್ಗಿದ ಚೋರ ಹುಂಡಿಯನ್ನು ಒಡೆದು ಹಣಕ್ಕಾಗಿ ತಡಕಾಡಿದ್ದಾನೆ. ಹುಂಡಿಯ ಹಣವನ್ನು ದೇವಾಲಯ ಸಮಿತಿಯವರು ಇತ್ತೀಚೆಗಷ್ಟೇ ತೆಗೆದಿದ್ದರಿಂದ ಕಳ್ಳನ ಪ್ರಯತ್ನ ವಿಫಲವಾಗಿದೆ. ದೇವಾಲಯದ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಲುಂಗಿ ಶರ್ಟು ಧರಿಸಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕನ್ನಡಕ ಧರಿಸಿದ್ದ ಓರ್ವ ವ್ಯಕ್ತಿ ರಾತ್ರಿ ೧೦.೩೦ಕ್ಕೆ ದೇವಾಲಯದ ಬೀಗ ಒಡೆದು ಒಳ ಪ್ರವೇಶಿಸಿರುವ ದೃಶ್ಯ ಕಂಡು ಬಂದಿದೆ, ದೇವಾಲಯದಲ್ಲಿ ೫ ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು ಅದರಲ್ಲಿ ೧ ಸಿಸಿ ಕ್ಯಾಮರಾವನ್ನು ಕದ್ದೊಯ್ಯಲಾಗಿದೆ.

ನಂತರ ನಾಡಕಚೇರಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳ ಗ್ರಾಮಲೆಕ್ಕಿಗರು ಆರ್‌ಐ ಕುಳಿತುಕೊಳ್ಳುವ ಟೇಬಲ್ ಅನ್ನು ತೆರೆದು ತಡಕಾಡಿದ್ದು ೮ ಗಾಡ್ರೇಜ್‌ನ್ನು ತೆರೆದು ಕಡತಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಕಾಲ್ಕಿತ್ತಿದ್ದಾನೆ. ಅಲ್ಲಿನ ಪಕ್ಕದಲ್ಲೇ ಇರುವ ಸರಕಾರಿ ಪ್ರವಾಸಿ ಮಂದಿರದ ಬೀಗ ಒಡೆದು ಒಳನುಗ್ಗಿರುವ ಕಳ್ಳ ಅಲ್ಲಿಯೂ ಅಲ್ಮೆರಾದಲ್ಲಿ ಇರಿಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ. ನಾಡಕಚೇರಿಯ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಮುಟ್ಟದೆ ಕಚೇರಿಯ ೮ ಅಲ್ಮೆರಗಳ ಬೀಗವನ್ನು ಮುರಿದು ದಾಖಲಾತಿ ಪತ್ರ ಇನ್ನಿತರ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಹೊರಹೋಗಿದ್ದಾನೆ. ಒತ್ತಿನಲ್ಲಿಯೇ ಇರುವ ಶುದ್ಧ ನೀರಿನ ಘಟಕದ ಬೀಗ ಒಡೆದು ಒಳನುಗ್ಗಿ ಅಲ್ಲಿಂದ ನೇರವಾಗಿ ರಾತ್ರಿ ೧.೩೦ ಗಂಟೆಯ ಸಂದರ್ಭದಲ್ಲಿ ಮಧುರಮ್ಮ ಬಡಾವಣೆಯ ಎ.ಆರ್. ಅಸೋಷಿಯೇಟ್ಸ್ ಕಚೇರಿಗೆ ನುಗ್ಗಿದ್ದು ಅಲ್ಲಿದ್ದ ಕಡತ ಚೆಲ್ಲಾಡಿ ಕಬೋರ್ಡು ಮುರಿದು ಅದರಲ್ಲಿದ್ದ ರೂ. ೩,೦೦೦ ಅಪಹರಿಸಲಾಗಿದೆ. ಅಲ್ಲಿಂದ ೨ ಗಂಟೆಗೆ ಮಧುರಮ್ಮ ಬಡಾವಣೆಯ ಸ್ವಾಮಿ ಇಂಜಿನಿಯರ್ ವರ್ಕ್ಸ್ನ ಮಾಲೀಕ ದಿ. ಗಂಗಾಧರ ಅವರ ಮನೆಯ ೧ ಭಾಗದ ಬೀಗ ಮುರಿದು ಗಾಡ್ರೇಜ್ ತೆರೆದು ಜಾಲಾಡಿದ್ದು, ಏನೂ ಸಿಗದಿದ್ದಾಗ ಅದೇ ಮನೆಯ ಇನ್ನೊಂದು ಭಾಗದ ಬೀಗ ಒಡೆಯಲು ಪ್ರಯತ್ನಿಸಿದಾಗ ಮನೆಯ ಮಾಲೀಕರಾದ ಮನೋಹರಿ ಅವರು ಸದ್ದು ಕೇಳಿ ಕಿರುಚಿದ್ದಾರೆ. ಈ ವೇಳೆ ಕಳ್ಳ ಕಳ್ಳತನಕ್ಕೆ ತಂದಿದ್ದ ಸ್ಕೂಡ್ರೆöÊವರ್, ಕಬ್ಬಿಣದ ರಾಡುಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಮನೆಯ ಮನೋಹರಿ ಅವರು ರಾತ್ರಿಯೇ ಸುಂಟಿಕೊಪ್ಪ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲಿಸಿದ್ದಾರೆ.

ಇದರೊಂದಿಗೆ ಸುಂಟಿಕೊಪ್ಪ ೨ನೇ ವಿಭಾಗದ ಅಂಗನವಾಡಿ ಕೇಂದ್ರದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳ ಗಾಡ್ರೇಜ್ ಬೀರುವನ್ನು ತೆರೆದು ಚೆಲ್ಲಾಪಿಲ್ಲಿಗೊಳಿಸಿ ಅಲ್ಲಿಂದ ತೆರಳಿದ್ದಾನೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್. ಪುನಿತ್ ಹಾಗೂ ಸಿಬ್ಬಂದಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.