ವೀರಾಜಪೇಟೆ, ಡಿ.೩೦: ತಾ.೨೭ರಂದು ನಡೆದ ವೀರಾಜಪೇಟೆ ತಾಲೂಕು ೩೫ ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆಯು ಇಂದು ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಎರಡು ಭಾಗಗಳಲ್ಲಿ ತಾಲೂಕು ಚುನಾವಣಾಧಿಕಾರಿ ಯೋಗಾನಂದ ಅವರ ನೇತೃತ್ವದಲ್ಲಿ ಜರುಗಿತು.

ಮತ ಎಣಿಕೆಗೆ ಎರಡು ಭಾಗಗಳನ್ನಾಗಿ ವಿಂಗಡಿಸಿದರೂ ಪ್ರತಿ ಗ್ರಾಮ ಪಂಚಾಯಿತಿಗಳ ಬ್ಯಾಲೆಟ್ ಪೇಪರ್‌ನ ಮತ ಎಣಿಕೆ ವಿಳಂಬವಾಗುತ್ತಿತ್ತು. ಮತ ಎಣಿಕೆ ಕೇಂದ್ರದಲ್ಲಿ ಬೆಳಿಗ್ಗೆ ೮ಗಂಟೆಗೆ ಬ್ಯಾಲೆಟ್ ಪೇಪರ್ ಜೋಡಿಸುವ ಕಾರ್ಯ ಆರಂಭವಾದರೂ ಮತ ಎಣಿಕೆ ಪೂರ್ವಾಹ್ನ ೧೦ಗಂಟೆಗೆ ಆರಂಭವಾಯಿತು. ಅಪರಾಹ್ನ ೧ಗಂಟೆ ವೇಳೆಗೆ ಯಾವುದೇ ಗ್ರಾಮ ಪಂಚಾಯಿತಿಯ ಪೂರ್ಣ ಫಲಿತಾಂಶ ಹೊರ ಬೀಳಲಿಲ್ಲ. ಅಪರಾಹ್ನ ೧೨ಗಂಟೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ಉನ್ನತಾಧಿಕಾರಿ ಕ್ಷಮಾ ಮಿಶ್ರಾ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ತಾಲೂಕು ಚುನಾವಣಾಧಿಕಾರಿ ಯೋಗಾನಂದ ಅವರೊಂದಿಗೆ ವಿಚಾರ ವಿನಿಮಯ ಮಾಡಿದರು. ಸಂತ ಅನ್ನಮ್ಮ ಪ್ರೌಢ ಶಾಲೆಯ ಕಟ್ಟಡದಲ್ಲಿ ವೀರಾಜಪೇಟೆ ವಿಭಾಗದ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ನಡೆದರೆ ಸಂತ ಅನ್ನಮ್ಮ ಕಾಲೇಜಿನ ಕಟ್ಟಡದಲ್ಲಿ ಪೊನ್ನಂಪೇಟೆ ವಿಭಾಗದ ಗ್ರಾಮಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ನಡೆಯಿತು.

ಚುನಾವಣೆಯಲ್ಲಿ ಸ್ಪರ್ಧಿಸಿದ ಗ್ರಾಮ ಪಂಚಾಯಿತಿಗಳ ಅಭ್ಯರ್ಥಿಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಮತ ಎಣಿಕೆ ಕೇಂದ್ರಗಳ ಹೊರಗೆ ನೂರಾರು ಮಂದಿ ಅಭ್ಯರ್ಥಿಗಳು ಕಾಯುತ್ತಿದ್ದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮತ ಎಣಿಕೆ ಪೂರ್ಣಗೊಳ್ಳದಿದ್ದರೂ ಗೆದ್ದವರು ಮತ ಎಣಿಕೆಯ ಕೇಂದ್ರದ ಹೊರಗೆ ಬೆಂಬಲಿಗರೊAದಿಗೆ ವಿಜಯೋತ್ಸವ ಆಚರಿಸುತ್ತಿದ್ದುದು ಕಂಡುಬAತು. ವೀರಾಜಪೇಟೆ ವಿಭಾಗದ ಡಿ.ವೈಎಸ್‌ಪಿ. ಸಿ.ಟಿ.ಜಯಕುಮಾರ್ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರದ ಸ್ಥಳದಲ್ಲಿಯೇ ಇದ್ದು ಬಿಗಿ ಬಂದೋ ಬಸ್ತ್ನ ಕಾರ್ಯ ನಿರ್ವಹಿಸಿದರು.

ಈ ಹಿಂದೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತದಾನ ಇಲ್ಲಿನ ಜೂನಿಯರ್ ಕಾಲೇಜಿನ ವಿಶಾಲವಾದ ಜಾಗ ಹಾಗೂ ಕಟ್ಟಡದಲ್ಲಿ ನಡೆಯುತ್ತಿತ್ತು. ಈಗ ಜೂನಿಯರ್ ಕಾಲೇಜು ಕಟ್ಟಡ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಚುನಾವಣೆಯ ಮಸ್ಟರಿಂಗ್, ಡಿ.ಮಸ್ಟರಿಂಗ್, ಚುನಾವಣೆಯ ಮತದಾನವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನ ಹಾಗೂ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯಲ್ಲಿ ಮತದಾನ ಎಣಿಕೆಗೆ ಮೂಲ ಸೌಕರ್ಯಗಳಿಲ್ಲದೆ ಚುನಾವಣಾ ಮತದಾನ ಎಣಿಕೆ ಸಿಬ್ಬಂದಿಗಳು ಪರದಾಡುವಂತಾಗಿತ್ತು.. ಇದರಿಂದ ಮತ ಎಣಿಕೆಯೂ ವಿಳಂಬವಾಗಲು ಕಾರಣವಾಯಿತು.

- ಡಿ.ಎಂ. ರಾಜ್‌ಕುಮಾರ್, ಪ್ರವೀಣ್ ಚಂಗಪ್ಪ