ಗೋಣಿಕೊಪ್ಪಲು, ಡಿ.೩೦: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಶಾಂತಿ ಯುತವಾಗಿ ನಡೆಯಿತು. ವೀರಾಜಪೇಟೆ ಸೆಂಟ್ ಆ್ಯನ್ಸ್ ಕಾಲೇಜಿನ ಆವರಣದಲ್ಲಿ ಮತ ಎಣಿಕೆ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವಿಶಾಲ ಕೊಠಡಿಯಲ್ಲಿ ಮತ ಎಣಿಕೆ ಯಾವುದೇ ಅಡೆತಡೆ ಇಲ್ಲದೆ ನಡೆದವು. ಬೆಳಿಗ್ಗೆ ಕೊಂಚ ನಿಧಾನಗತಿಯಲ್ಲಿದ್ದ ಮತ ಎಣಿಕೆ ಕಾರ್ಯ ನಂತರ ಬಿರುಸುಗೊಂಡಿತು. ತಹಶೀಲ್ದಾರ್ ಯೋಗಾನಂದ್ ಎಲ್ಲಾ ಕೊಠಡಿಗಳಿಗೆ ಭೇಟಿ (ಮೊದಲ ಪುಟದಿಂದ) ನೀಡಿ ವಿಶೇಷ ಗಮನ ಹರಿಸಿದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ‍್ರ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಯಭೇರಿ ಬಾರಿಸಿದ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ನಾಯಕರೊಂದಿಗೆ ವಾಹನ ನಿಲುಗಡೆ ಸ್ಥಳದಲ್ಲಿ ಜಯ ಘೋಷಣೆ ಹಾಕುತ್ತ ಹರ್ಷ ವ್ಯಕ್ತಪಡಿಸಿದರು. ಪಕ್ಷದ ನಾಯಕರು ಮಧ್ಯಾಹ್ನ ವೇಳೆ ಆಗಮಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಮಾಹಿತಿ ಪಡೆದರು. ಕಾಂಗ್ರೆಸ್ ಪಕ್ಷದ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ೫೦ ಟೇಬಲ್‌ನಲ್ಲಿ ೪೩೮ ಅಭ್ಯರ್ಥಿಗಳ ಮತ ಎಣಿಕಾ ಕಾರ್ಯವನ್ನು ೨೫೦ ಸಿಬ್ಬಂದಿಗಳು ನಡೆಸಿದರು. ೧೦ ಸುಸಜ್ಜಿತ ಕೊಠಡಿಯಲ್ಲಿ ಮತ ಎಣಿಕೆ ನಡೆಯಿತು. ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಡಿ.ವೈ.ಎಸ್.ಪಿ. ಜಯಕುಮಾರ್ ಮುಂದಾಳತ್ವದಲ್ಲಿ ೧೦೦ ಪೊಲೀಸರು ಬಂದೊಬಸ್ತ್ ಕಾರ್ಯ ಮಾಡಿದರು. ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಊಟ, ಕಾಫಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಧ್ವನಿವರ್ಧಕ ಮೂಲಕ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರಣೆ ನೀಡಿದರು. ಕಂಪ್ಯೂಟರ್ ಆಪರೇಟರ್‌ಗಳು ಒತ್ತಡ ನಡುವೆ ಕೆಲಸ ನಿರ್ವಹಣೆ ಮಾಡುವ ಮೂಲಕ ಮಾಹಿತಿಗಳನ್ನು ಒದಗಿಸಿದರು.
ಬಿಜೆಪಿ ವಲಯದ ಮಾಹಿತಿಯಂತೆ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಅಧಿಕ ಮಂದಿ ಜಯಗಳಿಸಿದ್ದಾರೆ ಎನ್ನುವ ಅಭಿಪ್ರಾಯ ಮೂಡಿ ಬಂದಿತು. ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಸ್ಥಾನಗಳು ದೊರಕಲಿಲ್ಲ ಎನ್ನುವ ಮಾತು ಆ ಪಕ್ಷದ ವಲಯದಲ್ಲಿ ಕೇಳಿ ಬಂದಿತು. -ವರದಿ: ಹೆಚ್.ಕೆ.ಜಗದೀಶ್