ಕೂಡಿಗೆ, ಡಿ. ೩೦: ಕಳೆದ ಎಂಟು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿದ್ದ ಕೂಡುಮಂಗಳೂರು- ಹಾರಂಗಿ ರಸ್ತೆಯ ಕಾಮಗಾರಿಯು ಕೆಲವು ಕಾರಣದಿಂದಾಗಿ ಸ್ಥಗಿತಗೊಂಡಿದ್ದು, ಇದೀಗ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ಮುಗಿದ ನಂತರ ಮುಂದಿನ ಭಾಗಗಳಿಗೆ ಡಾಂಬರಿಕರಣ ಕಾಮಗಾರಿಯು ಭರದಿಂದ ನಡೆಯುತ್ತಿದೆ.

ಲೋಕೋಪಯೋಗಿ ಇಲಾಖೆಯ ವತಿಯಿಂದ ೬೦ ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಈ ಕಾಮಗಾರಿಯ ಭೂಮಿ ಪೂಜೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ನೆರವೇರಿಸಿದರು. ಈ ರಸ್ತೆಯು ಕೂಡುಮಂಗಳೂರು ಸಮೀಪದ ಹಾಸನ - ಕುಶಾಲನಗರ ಹೆದ್ದಾರಿಗೆ ಹೊಂದಿರುವ ರಸ್ತೆಯಿಂದ ಪ್ರಾರಂಭವಾಗಿ ಕೂಡುಮಂಗಳೂರು, ಬಸವನತ್ತೂರು ಗ್ರಾಮದ ಮೂಲಕ ಚಿಕ್ಕತ್ತೂರು ಗ್ರಾಮದವರೆಗೆ ವಿಸ್ತೀರ್ಣವಾಗಿದೆ. ಗ್ರಾಮದ ಯುವಕರು ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟವನ್ನು ವೀಕ್ಷಣೆ ಮಾಡುತ್ತಿರುವ ದೃಶ್ಯ ಕಂಡುಬAದಿತು. ಕಾಮಗಾರಿ ನಡೆಯುವ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯ ಕುಶಾಲನಗರ ವಲಯದ ಇಂಜಿನಿಯರ್ ಪೀಟರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.