ವೀರಾಜಪೇಟೆ, ಡಿ. ೨೮ : ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಗಡಿಯಾರ ಕಂಬದ ಬಳಿ ನಡೆದಿದೆ.

ಇಂದು ಬೆಳಗ್ಗೆ ಕುಟ್ಟಂದಿ ಗ್ರಾಮದ ಎ. ರಂಜನ್ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಇಲ್ಲಿನ ಕಾರು ನಿಲ್ದಾಣದಿಂದ ಬಂದ ಆಲ್ಟೋ ಕಾರು (ಕೆಎ ೧೨ ಝಡ್ ೪೭೫೪) ಬೈಕ್‌ನ ಹಿಂಬದಿಗೆ ರಭಸದಿಂದ ಗುದ್ದಿದೆ. ಪರಿಣಾಮ ಬೈಕ್ ಸವಾರ ಕಾರ್‌ನ ಚಕ್ರಕ್ಕೆ ಸಿಲುಕಿಕೊಂಡು ಮೂರು ಮೀಟರ್ ದೂರ ಕಾರು ಎಳೆದೊಯ್ದಿದೆ. (ಮೊದಲ ಪುಟದಿಂದ) ಸವಾರನಿಗೆ ತಲೆ, ಕೈ, ಕಾಲುಗಳಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮೈಸೂರಿನ ಆಸ್ಪತ್ರೆಗೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ನಗರ ಪೊಲೀಸರು ಕಾರು ಚಾಲಕ ಬಿ.ಬೋಪಣ್ಣ (ಅಪ್ಪುಣಿ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಿಯಂತ್ರಣ ತಪ್ಪಿದ ಕಾರು

ಬಿಟ್ಟಂಗಾಲದ ನಿವಾಸಿ ಬೋಪಣ್ಣ ತನ್ನ ಆಲ್ಟೋ ಕಾರ್‌ನಲ್ಲಿ ಗಡಿಯಾರ ಕಂಬದ ಬಳಿ ತೆರಳುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿದ್ದ ಪರಿಣಾಮ ವೇಗ ಹೆಚ್ಚಾಗಿ ಕಾರು, ಚಾಲಕನ ಹಿಡಿತಕ್ಕೆ ಸಿಗದೇ ಗಡಿಯಾರ ವೃತ್ತದ ಮೂಲಕ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸವಾರನ ಹೆಲ್ಮೆಟ್ ಹಾರಿ ಹೋಗಿದೆ. ನಿಯಂತ್ರಣ ತಪ್ಪಿದ ಕಾರು ಗಣಪತಿ ದೇವಾಲಯ ಬಳಿಯ ಬಟ್ಟೆ ಮಳಿಗೆಗೆ ನುಗ್ಗಿದೆ. ಅಂಗಡಿ ಮುಂದೆ ನಿಂತಿದ್ದ ಮಾಲೀಕ ಮಹೇಂದ್ರ ಎಂಬುವರ ಕೈಗೆ ಗಾಯವಾಗಿದೆ. ಅಪಘಾತದ ದೃಶ್ಯ ಪಕ್ಕದಲ್ಲಿಯೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸಾರ್ವಜನಿಕರು ಗಾಯಾಳುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕ ಬೋಪಣ್ಣನಿಗೂ ಸೊಂಟ ಹಾಗೂ ಬೆನ್ನಿಗೆ ಗಾಯವಾದ ಹಿನ್ನೆಲೆ ಇವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾರಿನ ಮುಂಭಾಗ ಹಾಗೂ ಬೈಕ್ ಸಂಪೂರ್ಣ ಜಖಂಗೊAಡಿದೆ. ಅಂಗಡಿ ಮಾಲೀಕ ಮಹೇಂದ್ರ ನೀಡಿದ ದೂರಿನ ಮೇರೆ ವೀರಾಜಪೇಟೆ ನಗರ ಪೊಲೀಸರು ಕಾರಿನ ಚಾಲಕ ಬೋಪಣ್ಣನÀ ವಿರುದ್ಧ

ಪ್ರಕರಣ ದಾಖಲಿಸಿದ್ದಾರೆ. ಡಿಕ್ಕಿಯಾದ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ

ಪ್ರಕಾರ ಕಾರಿನ ಚಾಲಕನ ಆಸನದ ಕೆಳಭಾಗದಲ್ಲಿದ್ದ ಮ್ಯಾಟ್ ಆಕಸ್ಮಿಕವಾಗಿ ಎಕ್ಸಲೇಟರ್ ಮೇಲೆ ಬಿದ್ದಿದ್ದರಿಂದ ಕಾರಿನ ವೇಗ ಹೆಚ್ಚಿದ್ದು ಇದರಿಂದ ಚಾಲನೆಯ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.