ಗೋಣಿಕೊಪ್ಪಲು, ಡಿ. ೨೮: ಕಳೆದ ಆರು ತಿಂಗಳಿನಿAದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದ ಇರ್ಪು ಜಲಪಾತ ವೀಕ್ಷಣೆಗೆ ಇದೀಗ ಪ್ರವಾಸಿಗರು ತೆರಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇರ್ಪು ಜಲಪಾತಕ್ಕೆ ತೆರಳುವ ಮಾರ್ಗವು ಕುಸಿದುಬಿದ್ದ ಪರಿಣಾಮ ಜಲಪಾತ ವೀಕ್ಷಣೆಗೆ ತೆರಳಲು ನಿರ್ಬಂಧವೇರಲಾಗಿತ್ತು. ನಂತರದ ದಿನಗಳಲ್ಲಿ ಕೊರೊನಾ ಮಹಾಮಾರಿಯು ದೇಶದೆಲ್ಲೆಡೆ ಕಂಡು ಬಂದ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳದಂತೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇದರಿಂದ ಇರ್ಪು ಜಲಪಾತ ವೀಕ್ಷಣೆಗೂ ಅವಕಾಶವಿರಲಿಲ್ಲ. ಇದೀಗ ಇರ್ಪು ಜಲಪಾತ ಪ್ರವಾಸಿಗರಿಗೆ ಮುಕ್ತವಾಗಿದೆ. ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದಂದು ಹೆಚ್ಚಾಗಿ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಭಾಗದಲ್ಲಿ ಪ್ರವಾಸಿಗರ ವಾಹನ ನಿಲುಗಡೆಗೆ ಹೆಚ್ಚಿನ ಸ್ಥಳಗಳನ್ನು ಸುಸಜ್ಜಿತಗೊಳಿಸಲಾಗಿದೆ. ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ.

ಈ ಬಾರಿ ಸುರಿದ ಮಳೆಯಿಂದ ಇರ್ಪು ಜಲಪಾತವು ಧುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಜಲಪಾತಕ್ಕೆ ತೆರಳಲು ಪ್ರವಾಸಿಗರ ಅನುಕೂಲಕ್ಕಾಗಿ ಸುಗಮ ಸಂಚಾರಕ್ಕೆ ಕಾಂಕ್ರಿಟ್ ರಸ್ತೆ ಮಾರ್ಗವು ಸಿದ್ಧಗೊಂಡಿದೆ. ಪ್ರವಾಸೋದ್ಯಮ ಇಲಾಖೆಯು ರೂ. ೫೦ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ ಅಲ್ಲದೆ ಇರ್ಪು ಜಲಪಾತದ ಅಡಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಶ್ರೀ ರಾಮೇಶ್ವರ ದೇವಾಲಯ ಸಮಿತಿಯು ವಿಸ್ತಾರವಾದ ಕಬ್ಬಿಣದ ಸೇತುವೆ ನಿರ್ಮಿಸಿ ಸ್ನಾನ ಮಾಡಲು ಅವಕಾಶ ಕಲ್ಪಿಸಿದೆ.

ಕಳೆದ ಆರು ತಿಂಗಳ ನಂತರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗಿದೆ. ಪ್ರಸ್ತುತ ಕೋವಿಡ್ – ೧೯ ನಿಯಮಾವಳಿಗಳನ್ನು

(ಮೊದಲ ಪುಟದಿಂದ) ಪಾಲಿಸುವ ಮೂಲಕ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ. ಜಲಪಾತದ ಅಡಿಯಲ್ಲಿ ಸುಸಜ್ಜಿತವಾದ ಕಬ್ಬಿಣದ ಸೇತುವೆ ನಿರ್ಮಿಸಿ ಪ್ರವಾಸಿಗರಿಗೆ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಮೀಪದಲ್ಲಿರುವ ಇರ್ಪು ಶ್ರೀ ರಾಮೇಶ್ವರ ದೇವಾಲಯವನ್ನು ರೂ. ೨ ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದ್ದು ಆಗಮಿಸುವ ಪ್ರವಾಸಿಗರು ದೇವಸ್ಥಾನವನ್ನು ವೀಕ್ಷಿಸಬಹುದಾಗಿದೆ.

ಕಳೆದ ಬಾರಿಗಿಂತ ಈ ಬಾರಿ ನೀರಿನ ಪ್ರಮಾಣವು ಹೆಚ್ಚಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಇರ್ಪು ದೇವಾಲಯ ಸಮಿತಿ ಅಧ್ಯಕ್ಷ ಮಂದ್ರೀರ ಪಿ. ವಿಷ್ಣು ತಿಳಿಸಿದ್ದಾರೆ. -ಜಗದೀಶ್ ಹೆಚ್.ಕೆ.ತಂಗಲು ಅವಕಾಶವಿಲ್ಲ

ಪ್ರವಾಸಿ ತಾಣವಾದ ಇರ್ಪು ಜಲಪಾತಕ್ಕೆ ತೆರಳುವ ಮುನ್ನ ಅರಣ್ಯ ಇಲಾಖೆ ವತಿಯಿಂದ ನೇಮಕ ಮಾಡಿರುವ ಸಿಬ್ಬಂದಿಗಳು ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಿ ನಂತರ ತೆರಳಲು ಅವಕಾಶ ನೀಡುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಉತ್ತಮ ಮೆಟ್ಟಿಲುಗಳು, ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಶುಚಿತ್ವ ಕಾಪಾಡುವ ಮೂಲಕ ಪ್ರವಾಸಿಗರು ಸುಂದರ ತಾಣವನ್ನು ಸವಿಯಬಹುದಾಗಿದೆ. ಮೋಜು ಮಸ್ತಿಗೆ ಅವಕಾಶ ನಿರಾಕರಿಸಲಾಗಿದೆ.

ನಿಯಮ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ದೂರದಿಂದಲೇ ಸುಂದರವಾದ ಜಲಪಾತವನ್ನು ವೀಕ್ಷಿಸಿ ಸಂತೋಷ ಪಡಬಹುದಾಗಿದೆ. ಇಲ್ಲಿ ತಂಗಲು ಅವಕಾಶವಿರುವುದಿಲ್ಲ.

-ವೀರೇಂದ್ರ ಮರಿ ಬಸವಣ್ಣನವರ್, ಆರ್‌ಎಫ್‌ಒ ಶ್ರೀಮಂಗಲ ವಿಭಾಗ