ಮಡಿಕೇರಿ, ಡಿ. ೨೭: ಭಾಗಮಂಡಲದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವೊಂದನ್ನು ಸ್ಥಾಪಿಸುವ ಸಲುವಾಗಿ ದೇವಾಲಯಕ್ಕೆ ಸೇರಿದ ೧೩.೨೨ ಎಕರೆ ಜಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಈ ದಿಸೆಯಲ್ಲಿ ಕಾರ್ಯಾರಂಭಗೊAಡಿದ್ದು, ಜಾಗವನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ.ಈ ಜಾಗದಲ್ಲಿ ತ್ಯಾಜ್ಯ ನಿರ್ವಹಣೆ ಘಟಕವನ್ನು ಸ್ಥಾಪಿಸುವುದಕ್ಕೆ ಕೊಡಗು ಏಕೀಕರಣ ರಂಗ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರನ್ನು ‘ಶಕ್ತಿ’ ಪ್ರಶ್ನಿಸಿದಾಗ ಮಾಹಿತಿ ನೀಡಿದರು. ಈ ಹಿಂದೆ ಕೆಲವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಭಾಗಮಂಡಲದ ಪುಣ್ಯ ಕ್ಷೇತ್ರದಲ್ಲಿ ಎಲ್ಲ ತ್ಯಾಜ್ಯಗಳು ನೇರವಾಗಿ ಪವಿತ್ರ ಕಾವೇರಿ ನದಿಗೆ ಸೇರುತ್ತಿದೆ. ಸ್ನಾನದ ಕೊಳಕು ನೀರಿನೊಂದಿಗೆ ಶೌಚಾಲಯಗಳ ಮಲಿನ ನೀರು ಕೂಡ ಕಾವೇರಿಗೆ ಸೇರುವ ಮೂಲಕ ಪವಿತ್ರ ನದಿ ಅಪವಿತ್ರವಾಗುತ್ತಿದೆ ಎಂಬದಾಗಿ ಕೆಲವರು ರಾಜ್ಯ ಉಚ್ಚ ನ್ಯಾಯಾಲ ಯದಲ್ಲಿ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ಭಾಗಮಂಡಲ ಗ್ರಾಮ ಪಂಚಾಯಿತಿ ಹಾಗೂ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯ ಮಲಿನ ನೀರು ಮತ್ತು ತ್ಯಾಜ್ಯವನ್ನು ಆಧುನೀಕೃತ ಯಂತ್ರಗಳ ಸ್ಥಾಪನೆಯೊಂದಿಗೆ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಇದಕ್ಕಾಗಿ ರೂ. ೨.೫೦ ಕೋಟಿ ಮಂಜೂರು ಮಾಡಿದೆ. ನ್ಯಾಯಾಲಯದ
(ಮೊದಲ ಪುಟದಿಂದ) ನಿರ್ದೇಶನದ ಅನ್ವಯವೆ ವಿಶೇಷ ವ್ಯವಸ್ಥೆಯೊಂದಿಗೆ ಯಾವುದೇ ಮಲಿನ ನೀರು ಹಾಗೂ ತ್ಯಾಜ್ಯಗಳು ಕಾವೇರಿ ನದಿಯನ್ನು ಸೇರದಂತೆ ಸಮರ್ಪಕವಾಗಿ ವಿಲೇವಾರಿ ಮಾಡುವ ದೃಷ್ಟಿಯಿಂದ ಈ ಘಟಕವನ್ನು ಸ್ಥಾಪಿಸಲು ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಭಂವರ್ ಸಿಂಗ್ ವಿವರಿಸಿದರು.
ಈ ವಿಚಾರದ ಕುರಿತು ವ್ಯವಸ್ಥಾಪನಾ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಅವರು ಕೂಡ ಖಚಿತಪಡಿಸಿದ್ದು, ಜಿಲ್ಲಾ ಪಂಚಾಯಿತಿಯಿAದ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿಯಿತ್ತರು.
ಈ ನಡುವೆ ದೇವಾಲಯಕ್ಕೆ ಸೇರಿದ ಧಾರ್ಮಿಕ ದತ್ತಿ ಇಲಾಖೆಯ ನಿವೇಶನದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸುವುದು ಸರಿಯಲ್ಲ. ದೇವಾಲಯದ ಆಸ್ತಿಯನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಕೊಡಗು ಏಕೀಕರಣ ರಂಗದ ಪ್ರಮುಖರಾದ ಪ್ರಮೋದ್ ಸೋಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.