ಕುಶಾಲನಗರ, ಡಿ ೨೭: ತಾ. ೩೦ ರಂದು ನಡೆಯಲಿರುವ ಗ್ರಾಮ ಪಂಚಾಯ್ತಿ ಚುನಾವಣಾ ಮತ ಎಣಿಕೆ ಕೇಂದ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿರುವ ೬ ಕ್ಷೇತ್ರಗಳ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ಸಿದ್ದಪಡಿಸಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಒಟ್ಟು ೪೦ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು ಮುಳ್ಳುಸೋಗೆಯ ೬ ಕ್ಷೇತ್ರದ ೮೫ ಅಭ್ಯರ್ಥಿಗಳು, ಕೂಡುಮಂಗಳೂರು ೭ ಕ್ಷೇತ್ರದ ೮೭ ಅಭ್ಯರ್ಥಿಗಳು, ನೇರುಗಳಲೆಯ ೪ ಕ್ಷೇತ್ರದ ೧೭ ಅಭ್ಯರ್ಥಿಗಳು, ಬೆಸೂರು ಪಂಚಾಯ್ತಿಯ ೫ ಕ್ಷೇತ್ರದ ೫೧ ಅಭ್ಯರ್ಥಿಗಳು, ಕಂಬಿಬಾಣೆಯ ೨ ಕ್ಷೇತ್ರದ ೩೩ ಅಭ್ಯರ್ಥಿಗಳು, ವಾಲ್ನೂರು ತ್ಯಾಗತ್ತೂರಿನ ೪ ಕ್ಷೇತ್ರದ ೩೪ ಅಭ್ಯರ್ಥಿಗಳ ಮತ ಎಣಿಕೆಯನ್ನು ಕಾಲೇಜಿನ ಹೊಸ ಕಟ್ಟಡದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಉಳಿದಂತೆ ೩೪ ಕ್ಷೇತ್ರಗಳ ಮತ ಎಣಿಕೆ ಕಾಲೇಜಿನ ಹಳೆ ಕಟ್ಟಡದ ಕೊಠಡಿಗಳ ೫೮ ಟೇಬಲ್‌ಗಳಲ್ಲಿ ನಡೆಯಲಿದೆ. ಬೆಳಗ್ಗೆ ೭ ಗಂಟೆಯಿAದ ಮತ ಎಣಿಕೆ ಪ್ರಾರಂಭವಾಗಲಿದ್ದು, ಪ್ರಾರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ತದನಂತರ ಕ್ಷೇತ್ರವಾರು ಎಣಿಕೆ, ಈ ಸಂದರ್ಭ ಅಭ್ಯರ್ಥಿ ಅಥವಾ ಏಜೆಂಟ್‌ಗೆ ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿರಲು ಅವಕಾಶವಿದೆ. ಈಗಾಗಲೆ ಅನುಮತಿ ಪತ್ರಗಳನ್ನು ಒದಗಿಸಲಾಗಿದೆ ಎಂದು ಗೋವಿಂದರಾಜು ತಿಳಿಸಿದ್ದಾರೆ.