ಸೋಮವಾರಪೇಟೆ,ಡಿ.೨೭: ಜಿಲ್ಲೆಯ ಮಣ್ಣಿನಲ್ಲಿಯೇ ಸಾಹಿತ್ಯದ ಶಕ್ತಿ ಇದ್ದು, ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ಸಾಹಿತ್ಯದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು.

ಇಲ್ಲಿನ ಸೃಷ್ಟಿಯ ಚಿಗುರು ಕವಿ ಬಳಗದ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಜಾನಪದಗೀತೆ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕನ್ನಡ ಭಾಷಿಕರೊಂದಿಗೆ ಅನ್ಯ ಭಾಷಿಕರು ಹೆಚ್ಚಾಗಿದ್ದರೂ, ಕನ್ನಡ ಭಾಷಾ ಚಟುವಟಿಕೆಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿರುವುದರಿಂದ ಸಾಹಿತ್ಯದ ಬೆಳವಣಿಗೆ ಜಿಲ್ಲೆಯ ಮೂಲೆ ಮೂಲೆಗೂ ತಲುಪಿಸಲು ಸಾಧ್ಯವಾಗಿದೆ ಎಂದರು.

ಮೈಸೂರು ವಿಶ್ವ ವಿದ್ಯಾನಿಲಯದ ಪ್ರಾದ್ಯಾಪಕ ಹಾಗೂ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಪ್ರತಿಭೆಗಳಿದ್ದು, ಪ್ರತಿಭೆ ಅನಾವರಣಕ್ಕೆ ವೇದಿಕೆಯ ಕೊರತೆ ಇದೆ. ಅನ್ಯ ಸಂಗೀತದ ಮೋಡಿಗೊಳಗಾಗಿರುವ ಯುವಜನತೆಯಿಂದ ಜಾನಪದ ಸಾಹಿತ್ಯ ಮೂಲೆಗುಂಪಾಗುತ್ತಿದೆ ಎಂದು ವಿಷಾದಿಸಿದರು.

ಕೇವಲ ಕಾರ್ಯಕ್ರಮಗಳಲ್ಲಿ ಕವನಗಳನ್ನು ವಾಚಿಸಿದರಷ್ಟೇ ಸಾಲದು; ಅವುಗಳನ್ನು ಒಟ್ಟು ಸೇರಿಸಿ ಕವನ ಸಂಕಲನದ ರೂಪದಲ್ಲಿ ಹೊರ ತಂದಲ್ಲಿ ಅದನ್ನು ರಾಜ್ಯದಾದ್ಯಂತ ತಲುಪಿಸಲು ಸಾಧ್ಯವಾಗುತ್ತದೆ ಎಂದರು.

ಕವಿಗೋಷ್ಠಿಗೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಬಿ. ಸಂಜೀವ ಅವರು ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್ ವಹಿಸಿದ್ದರು.

ವೇದಿಕೆಯಲ್ಲಿ ಗೌರಮ್ಮ ದತ್ತಿ ಪುರಸ್ಕೃತೆ ಜಲಾ ಕಾಳಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್, ಸದಸ್ಯರಾದ ಬಿ.ಆರ್. ಮಹೇಶ್, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಜವರಪ್ಪ, ಕ.ರ.ವೇ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರುಳೀಧರ್, ಮಹಿಳಾ ಸಮಾಜದ ಅಧ್ಯಕ್ಷೆ ಉಷಾ ತೇಜಸ್ವಿ, ಬಳಗದ ಪುಟ್ಟಣ್ಣ ಆಚಾರ್ಯ, ನ.ಲ. ವಿಜಯ ಅವರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ.ಪಂ ಉಪಾಧ್ಯಕ್ಷ ಬಿ. ಸಂಜೀವ, ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಪತ್ರಕರ್ತ ಬಿ.ಎ. ಭಾಸ್ಕರ್, ಕಲಾವಿದ ಓಸ್ವಾಲ್ಡ್ ವೇಗಸ್(ಮ್ಯಾಕ್ಸಿ), ಮೈಸೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ಹಾಗೂ ಸಾಹಿತಿ ಬೆಸ್ಸೂರು ಮೋಹನ್ ಪಾಳೇಗಾರ್ ಅವರುಗಳನ್ನು ಸನ್ಮಾನಿಸಲಾಯಿತು.