*ಗೋಣಿಕೊಪ್ಪ, ಡಿ. ೨೭: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದ ಪ್ರತಿ ಮತಗಟ್ಟೆಗಳಲ್ಲೂ ಮತದಾರರು ಸಾಲು ನಿಂತು ಮತ ಚಲಾಯಿಸಿದರು.

ಕೋವಿಡ್ ಹಿನ್ನೆಲೆ ಪ್ರತಿ ಗ್ರಾಮದಲ್ಲೂ ಮತಗಟ್ಟೆಯನ್ನು ಹೆಚ್ಚು ಮಾಡಿದ ಕಾರಣ ಯಾವುದೇ ಒತ್ತಡವಿಲ್ಲದೆ, ಬಿರುಸಿನಿಂದ ಮತದಾನ ನಡೆಯಿತು. ಅರುವತೋಕ್ಲುವಿನಲ್ಲಿ ಈ ಹಿಂದೆ ಚುನಾವಣೆಗಳಲ್ಲಿ ಇದ್ದಂತೆ ಎರಡು ಮತಗಟ್ಟೆಗಳ ಬದಲಿಗೆ ೪ ಮತಗಟ್ಟೆ ವ್ಯವಸ್ಥೆ ಮಾಡಲಾಗಿತ್ತು.

ತಿತಿಮತಿ ಭಾಗದಲ್ಲೂ ಮತಗಟ್ಟೆ ಹೆಚ್ಚಿದ್ದ ಹಿನ್ನೆಲೆ ಸುಲಭ ರೀತಿಯ ಮತದಾನಕ್ಕೆ ಅವಕಾಶವಾಯಿತು. ತಿತಿಮತಿಯ ಹೆಬ್ಬಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಗಿರಿಜನ ಸಮುದಾಯದ ವಯೋವೃದ್ಧರು ತಮ್ಮ ಹಕ್ಕನ್ನು ಚಲಾಯಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಎಂಎ ವಿದ್ಯಾರ್ಥಿನಿ ಪೂರ್ಣಿಮಾ ಚಾರ್ಲಿ ಮೊದಲ ಮತದಾನ ಮಾಡಿ ಸಂಭ್ರಮಿಸಿದರು.

ಖಾಸಗಿ ಬಸ್ ಮತ್ತು ಸರ್ಕಾರಿ ಬಸ್‌ಗಳು ಹೆಚ್ಚಾಗಿ ಇಲ್ಲದಿದ್ದ ಕಾರಣ ಮೈಸೂರು ಕಡೆಗಳಿಂದ ಬಂದ ಮತದಾರರು ಮತ ಚಲಾಯಿಸಿ ತೆರಳಲು ಸಾಧ್ಯವಾಗದೆ ಪರದಾಡಬೇಕಾಯಿತು.

ಮತಗಟ್ಟೆಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿದ್ದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಪ್ರತಿ ಮತಗಟ್ಟೆಗಳನ್ನು ಪರಿಶೀಲಿಸಿದರು.

ರೇಷ್ಮೆಹಡ್ಲು (ಹೆಬ್ಬಾಲೆ ಪಟ್ಟಣ) ಗಿರಿಜನ ಹಾಡಿಯ ಪ್ರತಿ ಮತದಾರರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮತದಾನ ಮಾಡಿದರು.

ಕೆಲವು ಮತದಾರರು ಮುಂಜಾನೆ ಮತದಾನ ಮಾಡಿ ತೋಟದ ಕೆಲಸಕ್ಕೆ ತೆರಳಿದರೆ, ಕೆಲವರು ಕೆಲಸಕ್ಕೆ ರಜೆ ಮಾಡಿ ಮತದಾನ ಮಾಡಿದ್ದು ವಿಶ್ಸೇÀವಾಗಿತ್ತು. ಹೊಸ ಮತದಾರರು ಹುರುಪಿನಿಂದ ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬAತು.