ಮಡಿಕೇರಿ, ಡಿ. 24 : ಇತ್ತೀಚೆಗೆ ‘ಯುನೈಟೆಡ್ ಕಿಂಗ್‍ಡಮ್’ನಲ್ಲಿ ಕೋವಿಡ್ ರೂಪಾಂತರದ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಭಾರತ ಸರಕಾರವು ಅಲ್ಲಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಈ ಆದೇಶಕ್ಕೂ ಮುನ್ನ ಕೆಲವಾರು ಮಂದಿ ಭಾರತಕ್ಕೆ ಹಿಂತಿರುಗಿದ್ದರು. ಕೊಡಗಿನ 12 ಮಂದಿ ಯು.ಕೆ. ಮತ್ತು ಕೆನಡಾಗಳಿಂದ ಇತ್ತೀಚೆಗೆ ಹಿಂತಿರುಗಿದ್ದರು.
ಈ ಪೈಕಿ ಒಬ್ಬರು ಮಂಡ್ಯಕ್ಕೆ, ಮತ್ತೊಬ್ಬರು ಚಿಕ್ಕಮಗಳೂರಿಗೆ ಹಾಗೂ ಇನ್ನೊಬ್ಬರು ಮಂಗಳೂರಿಗೆ ತೆರಳಿದ್ದು ಅಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಇನ್ನುಳಿದ 9 ಮಂದಿ ಪೈಕಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ 9 ಮಂದಿಗೂ ನೆಗೆಟಿವ್ ವರದಿ ಬಂದಿರುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ‘ಶಕ್ತಿ’ಗೆ ತಿಳಿಸಿದ್ದಾರೆ.
ವಿದೇಶಗಳಿಂದ ಬರುವವರನ್ನು ತಕ್ಷಣವೇ ತಪಾಸಣೆಗೆ ಒಳಪಡಿಸಲಾಗುತ್ತದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 10 ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿಯೇ ಅವರನ್ನು ಇರಿಸಿಕೊಂಡು ಚಿಕಿತ್ಸೆ ಕೈಗೊಳ್ಳಲಾಗುತ್ತದೆ ಎಂದು ಮೋಹನ್ ವಿವರಿಸಿದರು.