ಮಡಿಕೇರಿ, ಡಿ. 24: ಜಿಲ್ಲೆಯ ಹಲವೆಡೆಗಳಲ್ಲಿ ನಿನ್ನೆಯಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಲ್ಲಿ ನಿನ್ನೆ ಸಂಜೆ ಹಾಗೂ ರಾತ್ರಿ ಅನಿರೀಕ್ಷಿತವಾಗಿ ಮಳೆ ಸುರಿದಿದ್ದು, ಕೃಷಿ ಕೆಲಸ ಹಾಗೂ ಕಾಫಿ ತೋಟಗಳಲ್ಲಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ತಾ. 24 ರಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ರೈತರು - ಬೆಳೆಗಾರರು ಆತಂಕ ಪಡುವಂತಾಗಿದೆ.

ಪ್ರಸ್ತುತ ಭತ್ತದ ಫಸಲಿನ ಕಟಾವು ಬಿರುಸಿನಿಂದ ನಡೆಯುತ್ತಿದ್ದು, ಈಗಿನ ಸನ್ನಿವೇಶ ಈ ಕೆಲಸಕ್ಕೆ ಅಡಚಣೆಯಾಗುವಂತಾಗಿದೆ. ಇದರೊಂದಿಗೆ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ ಕುಯಿಲು ಅದರಲ್ಲೂ ಅರೆಬಿಕಾ ಕಾಫಿಯ ಕೆಲಸ ಹೆಚ್ಚಾಗಿ ನಡೆಯುತ್ತಿದ್ದು, ಕೈಗೆ ಬಂದಿರುವ ಫಸಲನ್ನು ಉಳಿಸಿಕೊಳ್ಳಲು ಬೆಳೆಗಾರರು ಪರದಾಡುವಂತಾಗಿದೆ. ಕುಯಿದಿರುವ ಕಾಫಿ ಕಣದಲ್ಲಿರುವದು ಒಂದೆಡೆಯಾದರೆ ಕುಯ್ಯಲು ಬಾಕಿ ಇರುವ ಫಸಲು ಉದುರುವ ಸಾಧ್ಯತೆ ಹಾಗೂ ಈಗಿನ ಮಳೆಯಿಂದ ಸದ್ಯದಲ್ಲೇ ಕಾಫಿ ಹೂ ಬಿಡುವ ಸಾಧ್ಯತೆ ಎದುರಾಗಿದೆ.

ನಿನ್ನೆ ಮಡಿಕೇರಿಯಲ್ಲಿ ಸುಮಾರು ಅರ್ಧ ಇಂಚಿನಷ್ಟು ಮಳೆ ಸುರಿದಿದೆ. ಕೂಡಿಗೆ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕೊಡಗಿನ ಕುಟ್ಟ, ಬಿರುನಾಣಿ ಸೇರಿದಂತೆ ಹಲವು ಗ್ರಾಮಗಳಲ್ಲೂ ಸಾಧಾರಣ ಮಳೆಯಾಗಿದ್ದು, ಗುಡುಗು - ಮಿಂಚಿನ ಲಕ್ಷಣವೂ ಕಂಡು ಬಂದಿದ್ದಾಗಿ ವರದಿಯಾಗಿದೆ. ವಾತಾವರಣದಲ್ಲಿ ಉಂಟಾಗಿರುವ ಈ ದಿಢೀರ್ ಬದಲಾವಣೆ ಮತ್ತೆ ಮುಂದುವರಿದಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.

ಮಳೆಯ ವಿವರ

ಮಡಿಕೇರಿಯಲ್ಲಿ ಸುಮಾರು ಅರ್ಧ ಇಂಚಿನಷ್ಟು ಮಳೆಯಾಗಿದ್ದರೆ ಕೂಡಿಗೆ ವಿಭಾಗದಲ್ಲೂ ಅಂದಾಜು ಒಂದು ಇಂಚು ಮಳೆಯಾಗಿದೆ. ದಕ್ಷಿಣ ಕೊಡಗಿನ ಗೋಣಿಕೊಪ್ಪ, ಅತ್ತೂರು 25 ಸೆಂಟ್, ನಾಣಚ್ಚಿ, ಬೇಗೂರು 90 ಸೆಂಟ್, ಮಾಯಮುಡಿ 35 ಸೆಂಟ್, ನಲ್ಲೂರು, ಕಿರುಗೂರು, ಬಾಳಲೆ, ಬಿಳೂರು, ಪೊನ್ನಪ್ಪಸಂತೆ ವಿಭಾಗದಲ್ಲಿ 60 ಸೆಂಟ್, ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ 15 ರಿಂದ 20 ಸೆಂಟ್, ವೀರಾಜಪೇಟೆ 27 ಸೆಂಟ್, ಮಂಚಳ್ಳಿ, ಕುಟ್ಟ, ತೈಲ 50 ಸೆಂಟ್, ನೆಲಜಿ 20 ರಿಂದ 30 ಸೆಂಟ್, ಕೂಡಿಗೆ, ತೊರೆನೂರು, ಶಿರಂಗಾಲ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಅಂದಾಜು ಒಂದು ಇಂಚು ಮಳೆಯಾಗಿದೆ. ನೆಲಜಿ ವಿಭಾಗಕ್ಕೆ ತಾ. 24ರ ಸಂಜೆಯೂ ಮಳೆಯಾಗಿರುವ ಕುರಿತು ವರದಿಯಾಗಿದೆ.