*ಗೋಣಿಕೊಪ್ಪಲು, ಡಿ. 22: ಕೋವಿಡ್ ಕಾರಣದಿಂದ ಉತ್ಪಾದನೆ ಮತ್ತು ಮಾರಾಟದಲ್ಲಿ ತೀವ್ರ ಕುಸಿತ ಕಂಡಿದ್ದರೂ, 3 ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆಸಿ 30 ಲಕ್ಷ ಲಾಭವನ್ನು ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ 2019-20ರ ಸಾಲಿನಲ್ಲಿ ಗಳಿಸಿದೆ ಎಂದು ಸಂಘದ ಅಧಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾಹಿತಿ ನೀಡಿದ್ದಾರೆ.

ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ ನಿಯಮಿತ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು.

ಸಂಘದಲ್ಲಿ ಈ ಹಿಂದೆ ಉತ್ಪಾದಿಸುತ್ತಿದ್ದ ಸೋಡ ಮತ್ತು ತಂಪುಪಾನೀಯಗಳನ್ನು ಮರು ತಯಾರಿಸುತ್ತಿದ್ದು, ಈಗಾಗಲೇ ಪಟ್ಟಣದ ಸುತ್ತಮುತ್ತ ಸರಬರಾಜು ವ್ಯವಹಾರ ನಡೆಯುತ್ತಿದೆ. ನೂತನ ನೀರಿನ ಶುದ್ಧೀಕರಣ ಘಟಕಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸೋಡಾ ಸರಬರಾಜಿನಿಂದ ಪ್ರಸ್ತುತ 1.35 ಲಕ್ಷ ಆದಾಯ ಬಂದಿದೆ. ಮಡಿಕೇರಿ ಕೂರ್ಗ್ ಕನ್‍ಸೋಲಿಡೇಟೆಡ್ ಕಮೋಡಿಟಿ ಮತ್ತು ಪತಾಯಾ ಕೂರ್ಗ್ ಸ್ಟೋರ್ ಬ್ರಾಂಡ್‍ನಲ್ಲಿ ವಿವಿಧ ರೀತಿ ಜೇನು ಹಾಗೂ ನೆಲ್ಲಿಕಾಯಿ, ಹಿರಳೆಕಾಯಿ, ಬೈಂಬಳೆ, ಉಪ್ಪಿನಕಾಯಿಗಳನ್ನು ಸುಮಾರು 70ಲಕ್ಷದಲ್ಲಿ ಉತ್ಪಾದಿಸಿದ್ದು, ಸಂಘಕ್ಕೆ 9 ಲಕ್ಷ ನೇರ ಆದಾಯ ಬಂದಿದೆ ಎಂದರು. ಬೆಂಗಳೂರಿನ ಕೆ.ಆರ್. ಮಾರ್ಕೆಟಿನ ಹಣ್ಣಿನ ಮಂಡಿಯಲ್ಲಿ ಸುಮಾರು 1 ಕೋಟಿ 20 ಲಕ್ಷ ಹಣ್ಣಿನ ವ್ಯಾಪಾರ ನಡೆಸಿದ್ದು, 10 ಲಕ್ಷ 20 ಸಾವಿರ ಆದಾಯಗಳಿಸಲಾಗಿದೆ. ಹಾಗೆಯೆ ಸಿಂಗನ ಅಗ್ರಹಾರ ಎ.ಪಿ.ಎಂ.ಸಿ. ಯಾರ್ಡ್‍ನಲ್ಲಿ 60 ಲಕ್ಷ ಹಣ್ಣಿನ ವ್ಯಾಪಾರ ನಡೆಸಿ 6 ಲಕ್ಷ ಆದಾಯ ಗಳಿಸಲಾಗಿದೆ ಎಂದು ತಿಳಿಸಿದರು.

ಪಾಲಿಬೆಟ್ಟದಲ್ಲಿ ಇರುವ ಸಂಘದ ಕಟ್ಟಡವನ್ನು ಪರಿಶಿಷ್ಟ ಪಂಗಡದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ನೀಡಲಾಗಿದ್ದು, ವಾರ್ಷಿಕ 2 ಲಕ್ಷದ 25 ಸಾವಿರ ಬಾಡಿಗೆ ರೂಪದಲ್ಲಿ ಆದಾಯ ಬಂದಿದ್ದು, ಕಾಫಿ ಮತ್ತು ತಾಳೆ ತೋಟದಲ್ಲಿ 1 ಲಕ್ಷ ಆದಾಯ ಗಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಿಡಿ ಸೌತೆ ಬೆಳೆಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಎಂ.ಆರ್.ಟಿ.ಎಂ. ಎಂಟರ್‍ಪ್ರೈಸಸ್ ಎಂಬ ಕಂಪೆನಿಯೊಂದಿಗೆ ನಮ್ಮ ಸಂಘವು ಮಾತುಕತೆ ನಡೆಸಿ ಸುಮಾರು 560 ಟನ್ ಮಿಡಿ ಸೌತೆ ಉತ್ಪಾದಿಸಿಕೊಡಲು ನಿರ್ಧರಿಸಲಾಗಿದೆ. ಮುಂದಿನ 15 ದಿನದೊಳಗೆ ಈ ಉತ್ಪಾದನೆಯನ್ನು ಪ್ರಾರಂಭಿಸಲಾಗು ವುದು. 2.50 ಕೋಟಿ ರೂಪಾಯಿಗಳ ವಹಿವಾಟು ಇದಾಗಿದ್ದು, ಇದರಲ್ಲಿ ಸಂಘಕ್ಕೆ ವಾರ್ಷಿಕ ಆದಾಯವಾಗಿ ಅಂದಾಜು 12 ಲಕ್ಷ ಬರಲಿದೆ. ಇದರೊಂದಿಗೆ ಇದೇ ಸಂಸ್ಥೆಯೊಂದಿಗೆ ಎಲ್ಲೊಪಿನೋ, ಟೊಮೊಟೊ, ಫೈನಾಪಲ್ ಹಣ್ಣಿನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲು ಒಡಂಬಡಿಕೆ ನಡೆದಿದೆ ಎಂದು ಸಭೆಗೆ ತಿಳಿಸಿದರು.

ಬಹುಬೇಡಿಕೆಯ ಮಿಡಿಸೌತೆಯನ್ನು ಜಿಲ್ಲೆಯ ಬೆಳೆಗಾರರು ಮೂಲ ಬೆಳೆಯ ಪರ್ಯಾಯವಾಗಿ ಬೆಳೆಸುವ ಮೂಲಕ ಆದಾಯ ಗಳಿಸಿಕೊಳ್ಳಲು ಮುಂದಾಗಬೇಕಾಗಿ ಈ ಸಂದರ್ಭ ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಳವಂಡ ಅರವಿಂದ್ ಕುಟ್ಟಪ್ಪ, ನಿರ್ದೇಶಕರುಗಳಾದ ಕಡೇಮಾಡ ಸುನೀಲ್ ಮಾದಪ್ಪ, ಕಿರಿಯಮಾಡ ಅರುಣ್ ಪೂಣಚ್ಚ, ಚೇಂದಂಡ ಸುಮಿಸುಬ್ಬಯ್ಯ, ಎಸ್.ಎಂ. ವಿಶ್ವನಾಥ್, ಎಸ್.ಎಸ್. ಸುರೇಶ್, ಶೋಭಕುಟ್ಟಪ್ಪ, ಚೇಂದ್ರಿಮಾಡ ಕೆ. ಕಾಳಯ್ಯ, ಪುಚ್ಚಿಮಾಡ ಇಂದಿರಾ ದೇವಯ್ಯ, ಸಿ.ಎಂ. ಸೋಮಣ್ಣ ಹಾಗೂ ಜಿಲ್ಲಾ ಸಹಕಾರ ಸಂಘದ ಉಪನಿಬಂಧಕ ಬಸವರಾಜು, ಸಂಘದ ವ್ಯವಸ್ಥಾಪಕರಾದ ಹೇಮಂತ್ ಹಾಗೂ ಸಿಬ್ಬಂದಿಗಳು, ಸದಸ್ಯರುಗಳು ಹಾಜರಿದ್ದರು.