ಸೋಮವಾರಪೇಟೆ, ಡಿ. 22: ತಾಲೂಕಿನ 40 ಗ್ರಾಮ ಪಂಚಾಯಿತಿಗಳ 462 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಆಯ್ಕೆಗಾಗಿ ಇಂದು ಮತದಾನ ನಡೆಯಿತು.

ಒಂದೆರಡು ಮತಗಟ್ಟೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಘಟನೆಗಳು ನಡೆದು, ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಬೀಸುವ ಮೂಲಕ ಅಭ್ಯರ್ಥಿಗಳು ಹಾಗೂ ಬೆಂಬಲಿಗರನ್ನು ಚದುರಿಸಿದ್ದನ್ನು ಹೊರತು ಪಡಿಸಿದರೆ, ಉಳಿದಂತೆ ತಾಲೂಕಿನಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಿತು.

ಕೂತಿಯಲ್ಲಿಲ್ಲ ಚುನಾವಣೆ: ತಾಲೂಕಿನಲ್ಲಿ ಒಟ್ಟು 483 ಸ್ಥಾನಗಳಿದ್ದು, ಇದರಲ್ಲಿ 19 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರಪೇಟೆಯ ಕೂತಿ ಗ್ರಾಮದ ಎರಡು ಸ್ಥಾನದಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರಿಂದ ಅಭ್ಯರ್ಥಿಗಳು ಕಣದಲ್ಲಿ ಇರಲಿಲ್ಲ. ಹೀಗಾಗಿ ಕೂತಿ ಗ್ರಾಮದಲ್ಲಿ ಯಾವದೇ ಚುನಾವಣಾ ಪ್ರಕ್ರಿಯೆಗಳು ನಡೆಯಲಿಲ್ಲ. ಕೂತಿ, ಎಡದಂಟೆ ಗ್ರಾಮಸ್ಥರು ಚುನಾವಣೆಯಿಂದ ಹಿಂದೆ ಸರಿದು ಕೃಷಿ ಕಾರ್ಯದಲ್ಲಿ ಎಂದಿನಂತೆ ತೊಡಗಿದ್ದರು.

ಈ ಮತಗಟ್ಟೆಗೆ ಒಳಪಟ್ಟಂತೆ 180 ಕುಟುಂಬಗಳಿದ್ದು, ಒಟ್ಟು 680 ಮತದಾರರಿದ್ದಾರೆ. ವಿವಿಧ ಬೇಡಿಕೆಗಳು ಈಡೇರಿಲ್ಲ ಎಂದು ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದರು. ರಸ್ತೆ, ವಿದ್ಯುತ್, ನೆಟ್‍ವರ್ಕ್, ನ್ಯಾಯಬೆಲೆ ಅಂಗಡಿ, ಕ್ಷೇತ್ರದ ಮೀಸಲಾತಿಗೆ ಸಂಬಂಧಿಸಿದಂತೆ ತಾಲೂಕು ತಹಶೀಲ್ದಾರ್ ಜೊತೆಯಲ್ಲಿ ನಡೆದ ಮಾತುಕತೆಯೂ ವಿಫಲವಾಗಿತ್ತು. ಈ ಹಿನ್ನೆಲೆ ಅಭ್ಯರ್ಥಿಗಳೂ ಕಣಕ್ಕೆ ಇಳಿದಿರಲಿಲ್ಲ. ಪರಿಣಾಮ ಕೂತಿ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ಚಟುವಟಿಕೆ ಇಲ್ಲದೇ ಎಂದಿನಂತೆ ಜನಜೀವನ ನಡೆಯಿತು.

ಉಳಿದಂತೆ ತಾಲೂಕಿನ 462 ಸ್ಥಾನಗಳಿಗೆ ಸಂಬಂಧಿಸಿದಂತೆ 1488 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲೆಡೆಯೂ ಅಭ್ಯರ್ಥಿಗಳು ಮತಗಟ್ಟೆಯ ಬಳಿ ತಮ್ಮ ಪರವಾಗಿ ಮತಯಾಚಿಸುವ ಅಂತಿಮ ಹೋರಾಟದ ಚಿತ್ರಣ ಕಂಡುಬರುತ್ತಿತ್ತು.

ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಮತಯಾಚನೆಗೆ ಅವಕಾಶ ಕಲ್ಪಿಸಿದ್ದರೂ ಹಲವೆಡೆಗಳಲ್ಲಿ ಈ ನಿಯಮ ಉಲ್ಲಂಘನೆಯಾಯಿತು. ಮತಗಟ್ಟೆಯ ಕರ್ತವ್ಯದಲ್ಲಿದ್ದ ಪೊಲೀಸರು ಅಭ್ಯರ್ಥಿಗಳು ಹಾಗೂ ಬೆಂಬಲಿಗರನ್ನು 200 ಮೀಟರ್ ದೂರದ ಆಚೆಗೆ ಕಳುಹಿಸಲು ಹರಸಾಹಸ ಪಡುತ್ತಿದ್ದ ಚಿತ್ರಣ ಬಹುತೇಕ ಬೂತ್‍ಗಳಲ್ಲಿ ಕಂಡುಬಂತು.

ಕಾಫಿ ಹಾಗೂ ಭತ್ತ ಕೊಯ್ಲು ಸಮಯವಾಗಿದ್ದರಿಂದ ಬೆಳಿಗ್ಗೆ 7 ರಿಂದ 10 ಹಾಗೂ ಸಂಜೆ 3 ರಿಂದ 5 ಗಂಟೆಯವರೆಗೆ ಬಿರುಸಿನ ಮತದಾನ ನಡೆಯಿತು. 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನೀರಸವಾಗಿತ್ತು. ತಾಲೂಕಿನಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಧ್ಯಾಹ್ನದ ವೇಳೆಗೆ ಶೇ.55 ರಷ್ಟು ಮತದಾನವಾಗಿತ್ತು.

ಅಂತಿಮ ಹಂತದ ಕಸರತ್ತು: ಮತದಾರರಿಗೆ ತಮ್ಮ ಗುರುತನ್ನು ತಿಳಿಸುವ ಅಂತಿಮ ಹಂತದ ಕಸರತ್ತಿನಲ್ಲಿ ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದರು. ಇದರೊಂದಿಗೆ ಮತದಾರರನ್ನು ಮನೆಯಿಂದ ಕರೆತರಲು ಹಲವಷ್ಟು ಕಡೆಗಳಲ್ಲಿ ಅಭ್ಯರ್ಥಿಗಳೇ ವಾಹನದ ವ್ಯವಸ್ಥೆ ಮಾಡಿದ್ದರು. ಪಕ್ಷಾತೀತವಾಗಿ ನಡೆಯುವ ಚುನಾವಣೆಯಾದರೂ ರಾಜಕೀಯ ಪಕ್ಷಗಳ ಛಾಯೆ ಚುನಾವಣೆಯ ಮೇಲಿತ್ತು.

ಒಂದಿಲ್ಲೊಂದು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಕಾರ್ಯಕರ್ತರು ಹಾಗೂ ಮುಖಂಡರು ಅಭ್ಯರ್ಥಿಗಳಾಗಿರುವದರಿಂದ ತಮ್ಮ ಪಕ್ಷದ ಕಾರ್ಯಕರ್ತರ ಗುಂಪು ಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಕೊರೊನಾ ಆತಂಕದ ನಡುವೆಯೂ ನಡೆದ ಚುನಾವಣೆಯಾದ್ದರಿಂದ ಮತಗಟ್ಟೆಯ ಒಳಗೆ ಮಾತ್ರ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದ ನಿಯಮ ಪಾಲನೆಯಾಗಿತ್ತು. ಎಲ್ಲಾ ಮತಗಟ್ಟೆಯಲ್ಲೂ ಆಶಾ ಕಾರ್ಯಕರ್ತೆಯರು, ಮತದಾರರಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿದ ನಂತರ ಮತಗಟ್ಟೆಯ ಒಳಗೆ ಪ್ರವೇಶ ಕಲ್ಪಿಸಿದರು.

ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಬಿರುಸಿನ ಮತದಾನ ನಡೆಯಿತು. 5 ಗಂಟೆಯ ಒಳಗೆ ಮತಗಟ್ಟೆಯೊಳಗೆ ಉಪಸ್ಥಿತರಿದ್ದ ಮಂದಿಗೆ ಮತದಾನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಕೆಲಸ ಕಾರ್ಯಕ್ಕೆ ತೆರಳಿದ್ದ ಮಂದಿ ಸಂಜೆ 4 ಗಂಟೆಯ ವೇಳೆಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಕೆಲವೆಡೆ 6 ಗಂಟೆಯ ನಂತರವೂ ಮತದಾನ ನಡೆಯಿತು.

ಹಿರಿಯರಿಂದ ಮತದಾನ: ಪಟ್ಟಣ ಸಮೀಪದ ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಬೂತ್‍ನಲ್ಲಿ 97 ವರ್ಷದ ಸುಬ್ರಮಣ್ಯ, 98 ವರ್ಷದ ಬಿದ್ದಪ್ಪ, 99 ವರ್ಷದ ಜಾನಕಿ ಅವರುಗಳು ಸಹಾಯಕರೊಂದಿಗೆ ಆಗಮಿಸಿ ಇಳಿವಯಸ್ಸಿನಲ್ಲೂ ಮತದಾನದಲ್ಲಿ ಭಾಗವಹಿಸಿದ್ದರು. ವೃದ್ಧರು, ಅನಾರೋಗ್ಯ ಪೀಡಿತರನ್ನು ಮತಗಟ್ಟೆಯೊಳಗೆ ಕರೆದೊಯ್ಯಲು ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಧಿಕಾರಿಗಳ ತಂಡ: ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಉಪತಹಶೀಲ್ದಾರ್ ನೇತೃತ್ವದಲ್ಲಿ 6 ಹೋಬಳಿಗಳಲ್ಲಿ 6 ತಂಡಗಳನ್ನು ರಚಿಸಲಾಗಿತ್ತು. ತಾಲೂಕಿನಲ್ಲಿ 40 ಚುನಾವಣಾಧಿಕಾರಿಗಳು, 40 ಸಹಾಯಕ ಚುನಾವಣಾಧಿಕಾರಿಗಳು, 6 ಮಂದಿ ಹೆಚ್ಚುವರಿ ಚುನಾವಣಾಧಿಕಾರಿಗಳು, ಪ್ರತಿ 10 ಗ್ರಾ.ಪಂ.ಗಳಿಗೆ ಒಬ್ಬರಂತೆ 4 ಮಂದಿ ನೋಡಲ್ ಅಧಿಕಾರಿಗಳು, 14 ಮಂದಿ ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಿದರು.

ಪೊಲೀಸ್ ಬಂದೋಬಸ್ತ್: ಪೊಲೀಸ್ ಡಿವೈಎಸ್‍ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಮತಗಟ್ಟೆ, ಗಡಿಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಡುವಂತೆ ಈರ್ವರು ಸರ್ಕಲ್ ಇನ್ಸ್‍ಪೆಕ್ಟರ್, 8 ಮಂದಿ ಠಾಣಾಧಿಕಾರಿಗಳು, 22 ಎಎಸ್‍ಐ, 176 ಹೆಡ್‍ಕಾನ್ಸ್‍ಟೇಬಲ್-ಕಾನ್ಸ್‍ಟೇಬಲ್‍ಗಳು, 103 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿಗಳು, 40 ಮಂದಿಯನ್ನು ಒಳಗೊಂಡ 1 ಕೆಎಸ್‍ಆರ್‍ಪಿ, ತಲಾ 10 ಮಂದಿಯನ್ನು ಒಳಗೊಂಡ 3 ಡಿಎಆರ್ ತುಕಡಿ, 10 ರಿಂದ 15 ಬೂತ್‍ಗಳಿಗೆ ಎಎಸ್‍ಐ ನೇತೃತ್ವದಲ್ಲಿ 16 ಸೆಕ್ಟರ್ ಮೊಬೈಲ್ ವಾಹನಗಳನ್ನು ಪೊಲೀಸ್ ಇಲಾಖೆಯಿಂದ ವ್ಯವಸ್ಥೆಗೊಳಿಸಿ, ಚುನಾವಣೆಯ ಯಶಸ್ಸಿಗೆ ಸಹಕರಿಸಲಾಯಿತು.

ಇದರೊಂದಿಗೆ ಕುಶಾಲನಗರದ ಕೊಪ್ಪ, ಶಿರಂಗಾಲ, ಶಾಂತಪುರ, ಹಿಪ್ಲಿಗೇಟ್ ಗಡಿಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ನಿರ್ಮಿಸಿ, ವಾಹನಗಳ ತಪಾಸಣೆ ನಡೆಸಲಾಯಿತು. ತಾಲೂಕಿನ 224 ಬೂತ್‍ನಲ್ಲಿಯೂ ಆಶಾ ಕಾರ್ಯಕರ್ತೆಯರನ್ನು ಆರೋಗ್ಯ ಇಲಾಖೆಯಿಂದ ನೇಮಕ ಮಾಡಿದ್ದು, ಇವರುಗಳು ಕೋವಿಡ್ ಸಂಬಂಧಿತ ಕರ್ತವ್ಯ ನಿರ್ವಹಣೆ ಮಾಡಿದರು.

ತಾಲೂಕಿನಲ್ಲಿ 48 ಸೂಕ್ಷ್ಮ, 24 ಅತೀ ಸೂಕ್ಷ್ಮ ಹಾಗೂ 154 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿದ್ದು, ಮುಳ್ಳುಸೋಗೆ, ಹೆಬ್ಬಾಲೆಯಲ್ಲಿ ಪೊಲೀಸರು ಲಾಠಿ ಬೀಸಿದ್ದನ್ನು ಹೊರತುಪಡಿಸಿದರೆ ಎಲ್ಲೆಡೆಯೂ ಶಾಂತಿಯುತವಾಗಿ ಮತದಾನ ನಡೆಯಿತು.

ಪ್ರಮುಖರಿಂದ ಮತದಾನ: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕುಂಬೂರು ಸರ್ಕಾರಿ ಶಾಲೆಯ ಬೂತ್‍ನಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದರು. ಮಾಜೀ ಸಚಿವ ಬಿ.ಎ. ಜೀವಿಜಯ ಅವರು ಬಿಳಿಗೇರಿ ಸರ್ಕಾರಿ ಶಾಲೆ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ ಶಾಂತಳ್ಳಿ ಸರ್ಕಾರಿ ಶಾಲೆ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ತಾಕೇರಿ ಬೂತ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು ಕೊಡ್ಲಿಪೇಟೆಯಲ್ಲಿ, ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ಚೌಡ್ಲು ಗ್ರಾ.ಪಂ.ನ ಜ್ಞಾನವಿಕಾಸ ಶಾಲೆಯಲ್ಲಿ ಮತದಾನ ಮಾಡಿದರು.

- ವರದಿ ವಿಜಯ್ ಹಾನಗಲ್