ಮಡಿಕೇರಿ, ಡಿ. 22: ಸೋಮವಾರಪೇಟೆ ತಾಲೂಕುಗಳ ಗ್ರಾ.ಪಂ ಚುನಾವಣೆಯ ಮತದಾನದ ದಿನ ಕಂಡು ಬಂದ ವಿಶೇಷತೆಗಳು.
ಮುಖ್ಯವಾಗಿ 90 ರ ಹರೆಯದ ವಯೋವೃದ್ಧರು ತಮ್ಮ ಹಕ್ಕನ್ನು ಚಲಾಯಿಸಲು ಆಗಮಿಸಿದ್ದರು. ಇದರಲ್ಲಿ ಕೆಲವರು ಗಾಲಿ ಕುರ್ಚಿ ಇನ್ನು ಕೆಲವರು ಊರುಗೋಲಿನ ಸಹಾಯದಿಂದ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದರು. ವಿಶೇಷಚೇತನರೂ ಕೂಡ ಭಾಗಿಯಾಗಿದ್ದು ಗಮನಾರ್ಹ. ಕೆಲ ಅಭ್ಯರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದರೆ ಮತ್ತೆ ಕೆಲವರು ಮಕ್ಕಳನ್ನೂ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದು, ಕಂಡು ಬಂತು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಇಂದು ತಮ್ಮ ಪತ್ನಿಯೊಂದಿಗೆ ಆಗಮಿಸಿ ಕುಂಬೂರು ಮತಗಟ್ಟೆಯಲ್ಲಿ ಮತದಾನ ಮಾಡಿದರು.ಗುಡ್ಡೆಹೊಸೂರು ಮತಗಟ್ಟೆಗೆ ತೆರಳಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪರಿಶೀಲನೆ ನಡೆಸಿದರು.ಸೋಮವಾರಪೇಟೆ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ.ನ ಕೂಡ್ಲೂರು ಮತಗಟ್ಟೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ಮತ ಚಲಾವಣೆ ಮಾಡಿದರು.ಪ್ರಚಾರ : ಕೂಡಿಗೆಯಲ್ಲಿ ಮತಗಟ್ಟೆಯ ಎದುರು ಹಲವಾರು ಯುವಕರು ಅಭ್ಯರ್ಥಿಯೋರ್ವರ ಚಿಹ್ನೆ ಹಾಗೂ ಕ್ರಮ ಸಂಖ್ಯೆ ಹೊಂದಿರುವ ಟೀ ಶರ್ಟ್ ಧರಿಸಿ ಗುಂಪು ಸೇರಿ ಮತಯಾಚನೆ ಮಾಡುತ್ತಿದ್ದಾಗ ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಟೀ-ಶರ್ಟ್ ಅನ್ನು ತೆಗೆಸಿದರು. ಚಿತ್ರದಲ್ಲಿ ಸಿಲಿಂಡರ್ ಚಿಹ್ನೆಯನ್ನು ಗಮನಿಸಬಹುದು. ಭಾಗಮಂಡಲ ಕುಂದಚೇರಿ ಗ್ರಾಮ ಪಂಚಾಯತ್‍ನಲ್ಲಿ ತಾ. 11 ರಂದು ಸಾಮಾನ್ಯ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕೆದಂಬಾಡಿ ಮೋಹನ್ ಅವರು ನಾಮಪತ್ರ ಸಲ್ಲಿಸಿದ್ದು, ಹಿಂದಕ್ಕೆ ಪಡೆದಿದ್ದರು. ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಇಂದು ಮತ ಚಲಾಯಿಸಲು ಹೋದಾಗ ಅವರ ಹೆಸರು ಮತಪಟ್ಟಿಯಲ್ಲಿ ಇರಲಿಲ್ಲ.