ವೃದ್ಧರಿಂದ ಮತದಾನ

ಕೋವಿಡ್ ಸಂಕಷ್ಟ ಕಾಲದಲ್ಲೂ ಯಾವುದೇ ಭಯವಿಲ್ಲದೆ ವೃದ್ಧರು ತಮ್ಮ ಹಕ್ಕನ್ನು ಚಲಾಯಿಸಿದರು. ಸಿದ್ದಲಿಂಗಪುರದ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ 90 ವಯಸ್ಸಿನ ಮುತ್ತಮ್ಮ, ಸಂಚಾರಕ್ಕಾಗಿ ಗಾಲಿ ಕುರ್ಚಿಯ ಸಹಾಯ ಅಗತ್ಯವಿದ್ದರೂ ಧೃತಿ ಗೆಡದೆ ಮೊಮ್ಮಗಳ ಸಹಾಯ ದಿಂದ ಮದಲಾಪುರ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ 91 ವಯಸ್ಸಿನ ಸಾವಿತ್ರಮ್ಮ, 1952 ಇಸವಿಯಿಂದ ಇಂದಿನವರೆಗೂ ಯಾವುದೇ ಮತದಾನವನ್ನು ತಪ್ಪಿಸದೆ ಈ ಬಾರಿಯೂ ಮತ ಚಲಾಯಿಸಿದ 92 ರ ಪ್ರಾಯದ ನಾಪೋಕ್ಲು ಹಳೇ ತಾಲೂಕಿನ ಬೊಪ್ಪೇರ ಕಾವೇರಪ್ಪ್ಪ, ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಮತದಾನ ಮಾಡಿದ 92 ರ ಬಾಗಿ, ಗಾಲಿ ಕುರ್ಚಿಯಲ್ಲಿ ಆಗಮಿಸಿ ಮತದಾನ ಮಾಡಿದ ಕೋರಂಗಾಲದ ಅತ್ತೆಡಿ ರಾಮಯ್ಯ, ಬೇಳೂರು ಗ್ರಾ.ಪಂ ಬಳಗುಂದ ಶಾಲೆಯಲ್ಲಿ 97 ವರ್ಷದ ಸುಬ್ರಮಣ್ಯ ಹಾಗೂ 98 ವರ್ಷದ ಬಿದ್ದಪ್ಪ ಮತದಾನ ಮಾಡಿ ಸರ್ವರಿಗೆ ಮಾದರಿಯಾದರು.ಕೂಡ್ಲೂರು ಮತಗಟ್ಟೆ ಬಳಿ ಸಂಜೆ 4.30 ಆದರೂ ನೂರಾರು ಸಂಖ್ಯೆಯಲ್ಲಿ ಮತದಾರರು ನೆರೆದಿದ್ದು, ಚುನಾವಣಾಧಿಕಾರಿಗಳಿಗೆ ಶಪಿಸುತ್ತಿದ್ದರು. ಗಂಟೆಗಳ ಕಾಲ ಸಾಲಾಗಿ ನಿಂತು ಮತ ಚಲಾಯಿಸಬೇಕೇ? ಏನು ಈ ಅವ್ಯವಸ್ಥೆ ಎಂದು ಮತದಾರರು ವಿಷಾಧಿಸುತ್ತಿದ್ದ ದೃಶ್ಯ ಕಂಡು ಬಂತು. ಬಳಿಕ ಮತಗಟ್ಟೆಯ ಒಳಗಡೆ ಬಂದ ಮತದಾರರಿಗೆ ಟೋಕನ್ ನೀಡಿ ಮತದಾನ ಸಮಯ ಮೀರಿದ ನಂತರವೂ ಮತದಾನ ನಡೆಸಲಾಯಿತು.ಅತ್ತೂರಿನಲ್ಲಿ ಭಾರತೀಶ್ ಮತದಾನ

ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಮತಗಟ್ಟೆಯಲ್ಲಿ ಗ್ರಾಮದ ನಿವಾಸಿ ಬಿ.ಜೆ.ಪಿ. ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮತ್ತು ಹಾಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ಉಸ್ತವಾರಿ ಬಿ.ಬಿ.ಭಾರತೀಶ್ ಹಾಗೂ ಪತ್ನಿ ಚೈತ್ರ ಅವರು ಮತದಾನ ಮಾಡಿದರು. ಮತಗಟ್ಟೆಯಿಂದ ಆಸ್ಪತ್ರ್ರೆಗೆ

ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಗಾಲಿ ಕುರ್ಚಿಯಲ್ಲಿ ಆಗಮಿಸಿದ ಅನಾರೋಗ್ಯ ಪೀಡಿತ ಗೋಪಿನಾಥ್ ಎಂಬವರು ಎದೆನೋವು ತೀವ್ರವಾಗಿ ಮತ ಚಲಾಯಿಸದೇ ಆಸ್ಪತ್ರೆಗೆ ಸಾಗಿಸಲ್ಪಟ್ಟರು.ಅಧಿಕ ಮಹಿಳಾ ಮತದಾರರು

ಕುಶಾಲನಗರ ಹೋಬಳಿ ವ್ಯಾಪ್ತಿಯ ಮುಳ್ಳುಸೋಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ ಮತದಾನ ಪ್ರಾರಂಭದ ಸಮಯದಲ್ಲಿ ಕಡಿಮೆ ಮತದಾರರು ಕಂಡು ಬಂದರೆ, ಮಧ್ಯಾಹ್ನದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚು ಮಹಿಳಾ ಮತದಾರರು ಕಂಡು ಬಂದರು.

ಮುಳ್ಳುಸೋಗೆ, ಹೆಬ್ಬಾಲೆ, ಕೂಡುಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿನ ಮತದಾರರು ಬೆಂಗಳೂರು, ಮೈಸೂರು, ಹಾಸನ, ಪಿರಿಯಾಪಟ್ಟಣ ಮತ್ತಿತರ ಸ್ಥಳಗಳಲ್ಲಿ ನೆಲೆಸಿದ್ದು ಅವರುಗಳನ್ನು ಕರೆಸಿಕೊಂಡು ಮತ ಚಲಾಯಿಸಿ ನಂತರ ವಾಪಾಸ್ ಕಳುಹಿಸುವ ಹೊಣೆಗಾರಿಕೆಯನ್ನು ಕೆಲವು ಅಭ್ಯರ್ಥಿಗಳು ವಹಿಸಿಕೊಂಡಿದ್ದ ಪ್ರಕರಣಗಳು ಗೋಚರಿಸಿದವು. ಕೆಲವು ಗ್ರಾಮಗಳಲ್ಲಿ ಶೇ.25 ಕ್ಕೂ ಅಧಿಕ ಸಂಖ್ಯೆಯ ಮತದಾರರು ಈ ರೀತಿ ಹೊರಗಡೆಯಿಂದ ಅಭ್ಯರ್ಥಿಗಳ ವೆಚ್ಚದಲ್ಲಿ ಗ್ರಾಮಕ್ಕೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.