ಮಡಿಕೇರಿ, ಡಿ. 23: ಯುನೈಟೆಡ್ ಕಿಂಗ್ ಡಂನ ಹಲವೆಡೆ ಕೋವಿಡ್ಗೆ ಕಾರಣವಾಗುತ್ತಿರುವ ಕೊರೊನಾ ವೈರಸ್ನ ಹೊಸ ಸ್ವರೂಪದ ತಿರುವಿನ ಗಂಭೀರತೆಯ ಕಾರಣದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಾಜ್ಯಾದ್ಯಂತ ರಾತ್ರಿ ಕಫ್ರ್ಯೂ ಜಾರಿಗೆ ಸರಕಾರ ಮುಂದಾಗಿದೆ. ಈ ಆದೇಶ ತಾ. 24 ರಿಂದ (ಇಂದಿನಿಂದ) ಜಾರಿಗೆ ಬರಲಿದೆ. ರಾತ್ರಿ 11 ರಿಂದ ಬೆಳಿಗ್ಗೆ 5 ತನಕ ಕಫ್ರ್ಯೂ ಜಾರಿಯಲ್ಲಿರಲಿದ್ದು, ಇದು ಜನವರಿ 2ರ ಬೆಳಿಗ್ಗೆ 5 ಗಂಟೆವರೆಗೆ ಮುಂದುವರಿಯಲಿದೆ.ರಾತ್ರಿ ಕಫ್ರ್ಯೂ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾ. 23ರ ರಾತ್ರಿಯಿಂದಲೇ ಕಫ್ರ್ಯೂ ಜಾರಿ ಕುರಿತಾಗಿ ಹೇಳಿದ್ದರು. ಸೋಂಕು ತಡೆಗಟ್ಟಲು ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸುತ್ತಿರು ವದಾಗಿಯೂ ಅವರು ತಿಳಿಸಿದ್ದರು. ರಾತ್ರಿ 10ರ ಬದಲಿಗೆ 11 ರಿಂದ ಕಫ್ರ್ಯೂ ಜಾರಿಗೆ ಎಫ್ಕೆಸಿಸಿಐ ಅಧ್ಯಕ್ಷರು ಸರಕಾರಕ್ಕೆ ಮನವಿ ಮಾಡಿದ್ದರಲ್ಲದೆ, ದಿಢೀರ್ ನಿರ್ಧಾರದಿಂದಾಗಿ ಹಲವು ಗೊಂದಲಗಳು ಜನರಲ್ಲಿ ಉಂಟಾಗಿತ್ತು. ಬಳಿಕ ಸರಕಾರ ಸಂಜೆ ವೇಳೆಗೆ ಈ ಕುರಿತಾದ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ತಾ. 23ರ ರಾತ್ರಿಯ ಬದಲು ತಾ. 24ರ ರಾತ್ರಿಯಿಂದ ಕಫ್ರ್ಯೂ ಜಾರಿಯನ್ನು ಪ್ರಕಟಿಸಿದೆ. ಪ್ರಸ್ತುತ ಈ ಹಿಂದೆ ಇದ್ದಂತಹ ಒಂದಷ್ಟು ಸಮಸ್ಯೆಗಳು ಮರೆಯಾಗಿ ಪರಿಸ್ಥಿತಿ ತಿಳಿಯಾಗುತ್ತಿದೆ ಎಂಬ ಹಂತದಲ್ಲೇ ಇದೀಗ ಮತ್ತೊಮ್ಮೆ ಕೊರೊನಾತಂಕ ಹೆಚ್ಚಾಗಿರುವದು ಹಾಗೂ ಸರಕಾರ ದಿಢೀರ್ ಕಫ್ರ್ಯೂ ಜಾರಿ ಮಾಡಿರುವದು ಜನತೆ ಹೊಸ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತಾಗಿ ಹಲವರು ವ್ಯಕ್ತಪಡಿಸಿರುವ ಅಭಿಪ್ರಾಯ ಇಂತಿವೆ.
ಮಾರ್ಗಸೂಚಿ ಪಾಲನೆ
ಕೆಎಸ್ಆರ್ಟಿಸಿ ಬಸ್ಗಳ ಓಡಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಸಂಸ್ಥೆ ಸರಕಾರದ ಮಾರ್ಗಸೂಚಿಯ ಪ್ರಕಾರ ನಡೆಯಲಿದೆ. ಬಸ್ಗಳ ಓಡಾಟದ ಬಗ್ಗೆ ಸರಕಾರ ನೀಡುವ ಎಸ್ಓಪಿಯನ್ನು ಪಾಲಿಸಲಾಗುವದು ಎಂದರು.
ಪ್ರವಾಸಿಗರ ಓಡಾಟಕ್ಕೆ ಅವಕಾಶ ಇರಲಿ
ಕಫ್ರ್ಯೂ ಘೋಷಿಸಿರುವ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಈ ಕ್ರಮ ಚೇತರಿಸಿಕೊಳ್ಳುತ್ತಿದ್ದ ವ್ಯಾಪಾರ - ವಹಿವಾಟಿನ ಮೇಲೆ ಭಾರೀ ಪ್ರಹಾರ ನೀಡಿದೆ. ಈಗಾಗಲೇ ಶೇ. 80 ರಷ್ಟು
(ಮೊದಲ ಪುಟದಿಂದ) ಹೋಂಸ್ಟೇ, ರೆಸಾರ್ಟ್, ಹೊಟೇಲ್ಗಳು ಬುಕ್ಕಿಂಗಿ ಆಗಿದ್ದವು. ಇದೀಗ ಎಲ್ಲರೂ ಕರೆ ಮಾಡಿ ಇದರ ರದ್ಧತಿ ಹಾಗೂ ಮುಂಗಡ ಹಣ ಹಿಂತಿರುಗಿಸಲು ಕೇಳುತ್ತಿದ್ದಾರೆ. ಈ ಜಿಜ್ಞಾಸೆಯಲ್ಲಿ ಸಮಸ್ಯೆ ಎದುರಿಸಬೇಕಾಗಿದೆ ಎಂದು ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ರಾತ್ರಿ ಕಫ್ರ್ಯೂ ಇದ್ದರೂ ಹಗಲಿನ ವೇಳೆಯಲ್ಲಾದರೂ ಪ್ರವಾಸಿಗರ ಮುಕ್ತ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎಲ್ಲಾ ವಹಿವಾಟಿಗೆ ಧಕ್ಕೆ
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಅವರು ಪ್ರತಿಕ್ರಿಯಿಸಿದ್ದು, ಎಲ್ಲಾ ವಹಿವಾಟುಗಳು ಒಂದಕ್ಕೊಂದು ಪೂರಕವಾಗಿದ್ದು, ಈಗಷ್ಟೇ ಚೇತರಿಕೆ ಕಾಣುತ್ತಿತ್ತು. ಇದೀಗ ಎಲ್ಲಾ ಉದ್ಯಮಕ್ಕೂ ಮತ್ತೆ ಹೊಡೆತ ಬಿದ್ದಿದೆ. ವರ್ಷಾಂತ್ಯ ಹಾಗೂ ನೂತನ ವರ್ಷದ ಹಿನ್ನೆಲೆಯಲ್ಲಿ ಉದ್ಯಮಿಗಳು ಹೆಚ್ಚಿನ ಸರಕನ್ನು ದಾಸ್ತಾನು ಮಾಡಿಟ್ಟಿದ್ದರು. ಇದೀಗ ಎಲ್ಲರೂ ಆತಂಕ ಪಡುವಂತಾಗಿದೆ ಎಂದು ಹೇಳಿದ್ದಾರೆ.