ವೀರಾಜಪೇಟೆ, ಡಿ. 23: ಜಿಲ್ಲೆಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ತಾ. 22ರಂದು ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯ ಗೊಂಡಿದೆ. ಇದೀಗ ಎರಡನೆಯ ಹಂತದಲ್ಲಿ ವೀರಾಜಪೇಟೆ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ತಾ. 27ರಂದು ಮತದಾನ ನಡೆಯಲಿದ್ದು, ತಾಲೂಕಿನಾದ್ಯಂತ ಚುನಾವಣಾ ಕಾವು ಏರುತ್ತಿದೆ.

ತಾಲೂಕಿನಲ್ಲಿ ಒಟ್ಟು 35 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 104 ಗ್ರಾ.ಪಂ.ಗಳಿದ್ದು, ಈ ಪೈಕಿ ಮಡಿಕೇರಿ ತಾಲೂಕಿನಲ್ಲಿ 26, ಸೋಮವಾರಪೇಟೆ ತಾಲೂಕಿನಲ್ಲಿ 40 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 38 ಗ್ರಾ.ಪಂ.ಗಳಿವೆ. ಈ ತಾಲೂಕಿನ ಗೋಣಿಕೊಪ್ಪ ಪೊನ್ನಂಪೇಟೆ ಹಾಗೂ ಚನ್ನನಕೋಟೆ ಗ್ರಾ.ಪಂ.ಗಳ ಅಧಿಕಾರಾವಧಿ ಇನ್ನೂ ಮುಕ್ತಾಯ ವಾಗದ ಕಾರಣ ಇದೀಗ 35 ಗ್ರಾ.ಪಂ. ಗಳಿಗೆ ಚುನಾವಣೆ ನಿಗದಿಯಾಗಿದೆತಾಲೂಕಿನಲ್ಲಿ ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ, ಹಿಂಪಡೆಯುವುದು ಮತ್ತಿತರ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.35 ಗ್ರಾ.ಪಂ.ಗಳಿಗೆ ಸಂಬಂಧಿಸಿ ದಂತೆ ಒಟ್ಟು 150 ಕ್ಷೇತ್ರಗಳ 424 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 54 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ 13 ಮತಗಟ್ಟೆಗಳಲ್ಲಿ ಚುನಾವಣೆ ಇಲ್ಲ ಎಂದು ತಿಳಿದುಬಂದಿದೆ. ಒಟ್ಟು 196 ಮತಗಟ್ಟೆಗಳು ತಾಲೂಕಿನಲ್ಲಿದ್ದು, ಈ ಪೈಕಿ 4 ನಕ್ಸಲ್ ಪೀಡಿತ, 18 ಅತಿಸೂಕ್ಷ್ಮ ಹಾಗೂ 53 ಸೂಕ್ಷ್ಮ ಎಂದು ಪರಿಗಣಿಸಲ್ಪಟ್ಟಿವೆ. ತಾಲೂಕಿನಲ್ಲಿ ಒಟ್ಟು 1,24,501 ಮತದಾರರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. 424 ಸ್ಥಾನಗಳಿಗೆ ಒಟ್ಟು 924 ಮಂದಿ ಸ್ಪರ್ಧೆಯಲ್ಲಿದ್ದಾರೆ.