ಗೋಣಿಕೊಪ್ಪಲು, ಡಿ. 23: ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬಂದ ಹೆಣ್ಣು ಹುಲಿಯೊಂದು ಬಲೆಗೆ ಬಿದ್ದ ಘಟನೆ ಬಾಳೆಲೆ ಸಮೀಪದ ಕಾಫಿ ತೋಟವೊಂದರ ಬಳಿ ನಡೆದಿದೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯುವ ಮೂಲಕ ಮೈಸೂರು ಸಮೀಪದ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದಾರೆ. ದಕ್ಷಿಣ ಕೊಡಗಿನ ಬಾಳೆಲೆ ಗ್ರಾಮದ ಪಶುವೈದ್ಯ ಶಾಲೆಯ ಹಿಂಭಾಗದ ಕಾಫಿ ತೋಟದ ಬೇಲಿಯಲ್ಲಿ ಅಳವಡಿಸಿದ್ದ ಬಲೆಗೆ ಈ ಹುಲಿಯು ಸಿಲುಕಿಕೊಂಡಿದ್ದು ಬುಧವಾರ ಮುಂಜಾನೆ 9.30ರ ಸುಮಾರಿಗೆ ಗ್ರಾಮದ ವ್ಯಕ್ತಿಯೋರ್ವರು ತಮ್ಮ ಭತ್ತದ ಗದ್ದೆ ಬಳಿ ತೆರಳುತ್ತಿದ್ದ ಸಂದರ್ಭ ಹುಲಿಯು ಘರ್ಜಿಸುತ್ತಿರುವ ಶಬ್ದ ಕೇಳಿ ಅನತಿ ದೂರದಿಂದ ನಿಂತು ನೋಡಿದ ವೇಳೆ ಹುಲಿ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಸ್ಥಳದಿಂದ ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸುತ್ತಿದ್ದಂತೆಯೇ ಹಿರಿಯ ಅರಣ್ಯಾಧಿಕಾರಿಗಳು, ವೈದ್ಯಾಧಿಕಾರಿಗಳ ತಂಡ ಸಹಿತವಾಗಿ ಘಟನಾ ಸ್ಥಳಕ್ಕೆ ತೆರಳಿ ಮಾನವ ನಿರ್ಮಿತ ಬಲೆಯಲ್ಲಿ ಸಿಲುಕಿದ್ದ ಹುಲಿಯನ್ನು ಅರವಳಿಕೆ ಮದ್ದು ನೀಡುವ ಮೂಲಕ ಪ್ರಜ್ಞೆ ತಪ್ಪಿಸಿ ಬೋನಿನಲ್ಲಿಟ್ಟು ಬಾಳೆಲೆ, ಕಾರ್ಮಾಡು, ನಾಗರಹೊಳೆ ಮಾರ್ಗದ ಮೂಲಕ ಮೈಸೂರು ಭಾಗಕ್ಕೆ ರವಾನಿಸಿದ್ದಾರೆ. ಹುಲಿ ಸೆರೆಯಾಗಿದೆ ಎಂಬ ಸುದ್ದಿ ತಿಳಿದ ಗ್ರಾಮದ ಜನತೆ ತಂಡೋಪತಂಡವಾಗಿ ಸ್ಥಳಕ್ಕೆ ತೆರಳಿ ಹತ್ತಿರದಿಂದ ಹುಲಿಯನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದರು. ಗದ್ದೆ ಬಯಲಿನಿಂದ ಹುಲಿಯನ್ನು ಸಿಬ್ಬಂದಿಗಳು ಅರಣ್ಯ ವಾಹನಕ್ಕೆ ತರುವ ವೇಳೆ ತಮ್ಮ ಮೊಬೈಲ್‍ಗಳಲ್ಲಿ ಹುಲಿಯ ಚಿತ್ರವನ್ನು ಸೆರೆ ಹಿಡಿಯಲು ಕಾತುರರಾಗಿದ್ದರು. ಆದರೆ ಹುಲಿಯ ಮೈ ತುಂಬ ಬಲೆಯನ್ನು ಹೊದಿಸಿದ್ದ ಕಾರಣ ಹುಲಿಯನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗದೆ ನಿರಾಸೆಗೊಂಡರು.
ಹುಲಿಯ ಮೇಲೆ ಅರವಳಿಕೆ ಮದ್ದನ್ನು ಯಶಸ್ವಿಯಾಗಿ ಪ್ರಯೋಗಿಸಿದ ಅರಣ್ಯ ಇಲಾಖೆಯ ವೈದ್ಯ ಡಾ. ಮುಜೀಬ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ 8 ಅಡಿ ಉದ್ದದ ಹೆಣ್ಣು ಹುಲಿಯು ಸುಮಾರು 7 ರಿಂದ 8 ವರ್ಷದ್ದಾಗಿದೆ. ಅರಣ್ಯದಿಂದ ನಾಡಿನತ್ತ ಆಹಾರ ಅರಸುತ್ತಾ ಬಂದಿರುವ ಸಾಧ್ಯತೆ ಹೆಚ್ಚಿದೆ. ಹುಲಿಯು ಕ್ಷೇಮವಾಗಿದ್ದು ಮೈಸೂರಿನ ಸಮೀಪವಿರುವ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿ ನಂತರ ಸ್ಥಳಾಂತರ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ದಕ್ಷಿಣ ಕೊಡಗಿನ ಬಾಳೆಲೆ, ಬೆಸಗೂರು, ಕೊಟ್ಟಗೇರಿ, ನಿಟ್ಟೂರು, ಬೆಕ್ಕೆಸೊಡ್ಲೂರು, ಕಿರುಗೂರು, ಮಾಯಮುಡಿ, ಬಲ್ಯಮುಂಡೂರು, ಹಾಗೂ ಇತರೆಡೆ
(ಮೊದಲ ಪುಟದಿಂದ) ನಿರಂತರವಾಗಿ ಹುಲಿಯ ಸಂಚಾರವಿದ್ದು ಆಗಿಂದಾಗ್ಗೆ ರೈತರ ಹಸುಗಳÀ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು. ಇದರಿಂದ ರೈತ ತನ್ನ ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ. ಅರಣ್ಯ ಸಿಬ್ಬಂದಿಗಳು ಹುಲಿ ಕಾರ್ಯಾಚರಣೆಗೆ ಪ್ರಯತ್ನಪಟ್ಟರೂ ಯಾವುದೇ ಹುಲಿಯೂ ಸೆರೆಯಾಗಿರಲಿಲ್ಲ. ಇದೀಗ ಬಾಳೆಲೆ ಸಮೀಪ ಕಾಫಿ ತೋಟದ ಬೇಲಿಯಲ್ಲಿ ಯಾರೋ ಇಟ್ಟಿದ್ದ ಬಲೆಗೆ ಈ ಹುಲಿಯು ಸಿಲುಕಿಕೊಂಡಿದೆ. ಇದು ಈ ಭಾಗಗಳÀಲ್ಲಿ ಸಂಚಾರ ನಡೆಸುತ್ತಿದ್ದ ಹುಲಿಯೇ ಇರಬಹುದೆಂದು ಭಾವಿಸಲಾಗಿದೆ ಎಂದು ಗ್ರಾಮದ ಮುಖಂಡ, ಆರ್‍ಎಂಸಿಯ ಮಾಜಿ ಅಧ್ಯಕ್ಷ ಮಾಚಂಗಡ ಸುಜಾ ಪೂಣಚ್ಚ ಮಾಧ್ಯಮಕ್ಕೆ ಮಾಹಿತಿ ಒದಗಿಸಿದರು. ಹುಲಿಯು ಬಲೆಗೆ ಬಿದ್ದ ವಿಚಾರದಲ್ಲಿ ಕಾಫಿ ತೋಟದ, ಭತ್ತದ ಗದ್ದೆಯ ಮಾಲೀಕರನ್ನು ಅನಾವಶ್ಯಕವಾಗಿ ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸುವ ಉದ್ದೇಶ ಹೊಂದಿದ್ದಲ್ಲಿ ಇದನ್ನು ಕೈಬಿಡಬೇಕು. ತಪ್ಪಿದ್ದಲ್ಲಿ ನಾಗರಿಕರ ಸಹಕಾರದಿಂದ ಇಲಾಖೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹುಲಿಯ ಸೆರೆಯ ಸಂದರ್ಭ ತಿತಿಮತಿ ಆರ್‍ಎಫ್‍ಒ ಅಶೋಕ್ ಹುನಗುಂದ, ವನ್ಯಜೀವಿ ವಿಭಾಗದ ಎಸಿಎಫ್ ಕಿರಣ್ ಕುಮಾರ್, ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿಯ ಅರಣ್ಯ ಸಿಬ್ಬಂದಿಗಳು, ಪೊನ್ನಂಪೇಟೆ ಠಾಣಾಧಿಕಾರಿಗಳಾದ ಡಿ. ಕುಮಾರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಚಿತ್ರ ಸುದ್ದಿ,ಹೆಚ್.ಕೆ.ಜಗದೀಶ್/ಚನ್ನನಾಯಕ