ಮಡಿಕೇರಿ, ಡಿ.21: ಗ್ರಾಮ ಪಂಚಾಯತ್ ಚುನಾವಣೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ತಾ. 21 ರಂದು ಮಡಿಕೇರಿ, ಕುಶಾಲನಗರ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು. ನಗರದ ಸಂತ ಜೋಸೆಫರ ಪ್ರೌಢಶಾಲೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಎಲ್ಲಿ ನೋಡಿದರೂ ಅಧಿಕಾರಿ ಮತ್ತು ಸಿಬ್ಬಂದಿಗಳು ಚುನಾವಣಾ ಸಾಮಗ್ರಿಗಳನ್ನು ಹಿಡಿದು ವಾಹನಗಳತ್ತ ಸಾಗುವ ದೃಶ್ಯ ಕಂಡುಬಂದಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಚುನಾವಣಾ ವೀಕ್ಷಕ ಎ.ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಆರ್.ರೂಪಾ, ಚುನಾವಣಾ ಮೇಲ್ವಿಚಾರಕ ನಿಲೇಶ್ ಸಿಂಧೆ, ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಗ್ರಾ.ಪಂ.ಚುನಾವ ಸಂಬಂಧ ಒಟ್ಟು 157 ವಾಹನಗಳನ್ನು ನಿಯೋಜಿಸಲಾಗಿದೆ. 53 ಬಸ್ಸುಗಳು, 30 ಮಿನಿ ಬಸ್ಸು, 27 ಮ್ಯಾಕ್ಸಿಕ್ಯಾಬ್, 58 ಜೀಪು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮಕೈಗೊಂಡಿದೆ. ಕೆಲವೊಂದು ಆನೆ ಹಾವಳಿ ಹೆಚ್ಚಿರುವ ಪ್ರದೇಶಗಳ ಮತಗಟ್ಟೆಗಳಲ್ಲಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಸಿಬ್ಬಂದಿ ಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಡಿಸೆಂಬರ್, 22 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್-19 ಪಾಸಿಟಿವ್ ಸೋಂಕಿತರು ಸಂಜೆ 4 ಗಂಟೆಯಿಂದ 5 ರವರೆಗೆ ಪಿಪಿಇ ಕಿಟ್ ಧರಿಸಿ
(ಮೊದಲ ಪುಟದಿಂದ) ಮುಂಜಾಗ್ರತೆಯಿಂದ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮತದಾನದ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದರು. ತಹಶೀಲ್ದಾರ್ ಮಹೇಶ್, ತಾ.ಪಂ.ಇಒ ಲಕ್ಷ್ಮಿ, ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಇತರರು ಇದ್ದರು. ಮಡಿಕೇರಿ ತಾಲೂಕಿನ 108 ಕ್ಷೇತ್ರಗಳಲ್ಲಿ 267 ಸ್ಥಾನಗಳಿದ್ದು, 676 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ 177 ಕ್ಷೇತ್ರಗಳಿಗೆ 462 ಸ್ಥಾನಗಳಿದ್ದು, 1488 ಮಂದಿ ಕಣದಲ್ಲಿದ್ದಾರೆ.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಮೊದಲ ಹಂತದಲ್ಲಿ ಮಡಿಕೇರಿ ತಾಲೂಕಿನ (26) ಮತ್ತು ಸೋಮವಾರಪೇಟೆ ತಾಲೂಕಿನ (40) ಒಟ್ಟು 66 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆಯುತ್ತಿದೆ. ಗ್ರಾ.ಪಂ.ಚುನಾವಣೆ ಸಂಬಂಧ ಮಡಿಕೇರಿ(135) ಮತ್ತು ಸೋಮವಾರಪೇಟೆ ತಾಲೂಕಿನ(222) ಒಟ್ಟು 357 ಮತಗಟ್ಟೆಗಳಲ್ಲಿ ಡಿಸೆಂಬರ್, 22 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ನಿಯೋಜನೆ ಗೊಂಡಿರುವ ವಿವಿಧ ಹಂತದ ಚುನಾವಣಾಧಿಕಾರಿಗಳು ಸಮರೋಪಾ ದಿಯಲ್ಲಿ ಕಾರ್ಯ ನಿರ್ವಹಿಸಿದರು. ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿ ಗಳು, ಪೊಲೀಸ್ ಅಧಿಕಾರಿ ಗಳು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೊಠಡಿ ತೆರೆಯಲಾಗಿತ್ತು. ಚುನಾವಣೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸುಗಮವಾಗಿ ತಮ್ಮ ತಮ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ತೆರಳಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಮತದಾರರು ನಿರ್ಭೀತಿಯಿಂದ ಮತಹಕ್ಕು ಚಲಾಯಿಸಲು ಕ್ರಮವಹಿಸಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಜಿಲ್ಲಾ ಶಸಸ್ತ್ರ ಪಡೆ, ಪ್ರತಿ ಮತಗಟ್ಟೆಗಳಲ್ಲಿ ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಕುಶಾಲನಗರ ವರದಿ
ಕುಶಾಲನಗರ: ಮಂಗಳವಾರ ನಡೆಯಲಿರುವ ಗ್ರಾಮಪಂಚಾಯ್ತಿಗಳ ಪ್ರಥಮ ಹಂತದ ಮತದಾನ ಹಿನ್ನಲೆಯಲ್ಲಿ ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಸೇರಿದಂತೆ ಸಕಲ ಪೂರ್ವಸಿದ್ದತಾ ಕಾರ್ಯಗಳು ನಡೆದಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯ 40 ಗ್ರಾಮಪಂಚಾಯ್ತಿಗಳಿಗೆ ಮಂಗಳವಾರ (ಇಂದು) ಮತದಾನ ನಡೆಯಲಿದ್ದು ಒಟ್ಟು 210 ಮತಗಟ್ಟೆಗಳಲ್ಲಿ ಮತದಾನಕ್ಕೆ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಮಸ್ಟರಿಂಗ್ ಡಿಮಸ್ಟರಿಂಗ್ ಕಾರ್ಯಕ್ಕೆ 1 ಸಾವಿರ ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತದಾನದ ದಿನ ಗಂಟೆಗೊಮ್ಮೆ ಮತದಾನದ ಬಗ್ಗೆ ಚುನಾವಣಾ ಅಧಿಕಾರಿಗೆ ಮಾಹಿತಿ ಒದಗಿಸಲಾಗುವುದು. ಮತದಾನ ಕೇಂದ್ರಗಳಿಗೆ ತೆರಳುವ ಅಧಿಕಾರಿಗಳು ಸಿದ್ದತೆ ಕಾರ್ಯ ನಡೆಸಲಿದ್ದಾರೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಶಾಲನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆ ಕೇಂದ್ರ ಅಧಿಕಾರಿಗಳಿಗೆ ಮತಪೆಟ್ಟಿಗೆ, ಮತಪತ್ರ, ಮತದಾನ ಕೇಂದ್ರಗಳ ವಿವರ ಹಂಚಿಕೆ ಕಾರ್ಯ ನಡೆಯಿತು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಗಳು ಅಂಚೆ ಮತದಾನ ಮಾಡಿದರು. ಜಿಲ್ಲಾ ಚುನಾವಣಾ ವೀಕ್ಷಕರಾದ ದೇವರಾಜು, ಮಡಿಕೇರಿ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಕಾಲೇಜಿಗೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಸುಸೂತ್ರವಾಗಿ ಚುನಾವಣೆ ನಡೆಯಲು ಎಲ್ಲಾ ರೀತಿಯ ಸಿದ್ಧತೆಯೊಂದಿಗೆ ಭದ್ರತೆ ಕೂಡ ಕಲ್ಪಿಸಲಾಗಿದೆ ಎಂದರು. ಪ್ರತಿಯೊಂದು ಮತಗಟ್ಟೆಗೆ ಚುನಾವಣಾ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ ಎಂದರು.
ಭದ್ರತೆಗಾಗಿ ಓರ್ವ ಡಿವೈಎಸ್ಪಿ ನೇತೃತ್ವದಲ್ಲಿ ಇಬ್ಬರು ಪೊಲೀಸ್ ಇನ್ಸ್‍ಪೆಕ್ಟರ್, 88 ಸಬ್ ಇನ್ಸ್‍ಪೆಕ್ಟರ್, 22 ಎಎಸ್‍ಐ, 176 ಹೆಡ್‍ಕಾನ್ಸ್‍ಟೇಬಲ್ ಪೊಲೀಸ್ ಹಾಗೂ 103 ಹೋಂಗಾಡ್ರ್ಸ್‍ಗಳನ್ನು ಮತ್ತು ಹೆಚ್ಚುವರಿಯಾಗಿ ಒಂದು ಕೆಎಸ್‍ಆರ್‍ಪಿ, 3 ಡಿಎಆರ್ ತುಕಡಿ ನಿಯೋಜಿಸಲಾಗಿದೆ ಎಂದು ಸೋಮವಾರಪೇಟೆ ಉಪವಿಭಾಗದ ಉಪ ಅಧೀಕ್ಷಕ ಎಚ್.ಎಂ.ಶೈಲೇಂದ್ರ ಮಾಹಿತಿ ನೀಡಿದರು. 21 ಅತಿ ಸೂಕ್ಷ್ಮ, 46 ಸೂಕ್ಷ್ಮ, 143 ಸಾಮಾನ್ಯ ಮತಗಟ್ಟೆಗಳು ಇದ್ದು ಈ ವ್ಯಾಪ್ತಿಯಲ್ಲಿ ಎರಡು ಕೇಂದ್ರಗಳಾದ ಮುಟ್ಲು ಮತ್ತು ಹಮ್ಮಿಯಾಲ ಮಡಿಕೇರಿ ತಾಲೂಕು ವ್ಯಾಪ್ತಿಗೆ ಒಳಪಟ್ಟಿದೆ ಎಂದರು. ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳು ಭದ್ರತಾ ಕಾರ್ಯ ಪರಿಶೀಲನೆಯಲ್ಲಿ ತೊಡಗಿದ್ದರು.
ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆ ನಿಯಮಾನುಸಾರ ಮದ್ಯದಂಗಡಿಗಳು, ಎಂಆರ್‍ಪಿ ಬಾರ್‍ಗಳನ್ನು ಮುಚ್ಚಲಾಗಿದೆ. ಈ ಹಿನ್ನೆಲೆ ಕುಶಾಲನಗರ ಪಟ್ಟಣದಲ್ಲಿನ ಮದ್ಯದಂಗಡಿಗಳು, ಬಾರ್‍ಗಳು, ಎಂಆರ್‍ಪಿ ಕೇಂದ್ರಗಳಲ್ಲಿ ಗಡಿಭಾಗದ ಗ್ರಾಮಗಳಿಂದ ಗುಂಪುಗುಂಪಾಗಿ ಜನ ಸೇರುತ್ತಿರುವ ದೃಶ್ಯ ಗೋಚರವಾಗಿದೆ. ಮುಳ್ಳುಸೋಗೆ ಪಂಚಾಯ್ತಿಯ ಗಡಿಯಲ್ಲಿ ಕುಶಾಲನಗರ ಪಪಂ ವ್ಯಾಪ್ತಿಯ ಎರಡು ಅಂಗಡಿಗಳು ತೆರೆದಿದ್ದು ಭಾರೀ ವ್ಯಾಪಾರ ಕಾಣಬಹುದು. ಇನ್ನೊಂದೆಡೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೊಪ್ಪ ಗಡಿಭಾಗದ ಜನರು ವಾಹನಗಳಲ್ಲಿ ಸರದಿ ಸಾಲಿನಲ್ಲಿ ಬಂದು ಮದ್ಯ ಬಾಟಲಿ ಸರಬರಾಜು ಮಾಡುತ್ತಿರುವ ದೃಶ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವ ಬಗ್ಗೆ ನಾಗರಿಕರು ದೂರಿದ್ದಾರೆ. ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮಕೈಗೊಂಡು ಕುಶಾಲನಗರ ಪಟ್ಟಣದಲ್ಲಿ ಮದ್ಯದಂಗಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಆಗ್ರಹಿಸಿದ್ದಾರೆ.