ಮಡಿಕೇರಿ, ಡಿ.21: ಮಹಿಳೆಯರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳಿಗೆ ಒಂದೇ ಸೂರಿನಡಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಹಾಗೂ ತಾತ್ಕಾಲಿಕ ವಸತಿ ಸೇವೆಗಳನ್ನು ನೀಡುವುದು ‘ಸಖಿ ಒನ್ ಸ್ಟಾಫ್ ಕೇಂದ್ರ’ದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ದಿನದ 24 ಗಂಟೆಯೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್.ಕುಂದರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳೆಯರು ಹಲವು ಸಮಸ್ಯೆಗಳಿಂದ ಮಹಿಳಾ ಕೇಂದ್ರಕ್ಕೆ ಬಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಸ್ಪಂದಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಯಾವುದೇ ರೀತಿಯ ಸೌಲಭ್ಯಗಳು ಬೇಕಿದ್ದಲ್ಲಿ ಮಾಹಿತಿ ಒದಗಿಸಬೇಕು. ಇದನ್ನು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು. ಕೌಟುಂಬಿಕ ಸಮಸ್ಯೆಗಳು, ವರದಕ್ಷಿಣೆ ಕಿರುಕುಳ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಕೌನ್ಸೆಲಿಂಗ್ ಮೂಲಕ ಇತ್ಯರ್ಥಪಡಿಸಬಹುದಾಗಿದೆ. ಆನ್‍ಲೈನ್ ಮೂಲಕ ವೆಬಿನಾರ್ ಕಾರ್ಯಕ್ರಮವನ್ನು ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆಗೆ ಶ್ರಮಿಸಬೇಕು ಎಂದರು. ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆದವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆಯೇ ಎಂಬುದನ್ನು ಗಮನಿಸಬೇಕು ಎಂದು ಶ್ಯಾಮಲಾ ಎಸ್.ಕುಂದರ್ ಅವರು ಸಲಹೆ ಮಾಡಿದರು. ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಆಯಾಯ ಸಮಾಜದ ಮುಖಂಡರ ಜೊತೆ ಚರ್ಚಿಸಿ ಬಾಲ್ಯ ವಿವಾಹ ತಡೆಯುವಲ್ಲಿ ಚರ್ಚಿಸಬೇಕು. ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಶಿಕ್ಷಣ ಮತ್ತು ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ, ಉಚಿತ ಕಾನೂನು ನೆರವು ನೀಡುವುದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ ನೀಡುವುದು. ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ಸಾಧಿಸಲು ನೆರವು ನೀಡುವ ನಿಟ್ಟಿನಲ್ಲಿ ಸಾಂತ್ವನ ಯೋಜನೆ ಇದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎಸ್. ಅರುಂಧತಿ ಅವರು ಮಾತನಾಡಿ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿ 61 ಪ್ರಕರಣಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ 10, ಮಹಿಳೆಯರ ಮೇಲಿನ ಅತ್ಯಾಚಾರ 8, ಮಹಿಳೆಯರ

(ಮೊದಲ ಪುಟದಿಂದ) ಮೇಲಿನ ಕಿರುಕುಳ 3, ಕೌಟುಂಬಿಕ ದೌರ್ಜನ್ಯ 11, ಕಾಣೆಯಾದ ಪ್ರಕರಣಗಳು 4, ಇತರೆ 13 ಪ್ರಕರಣ ದಾಖಲಾಗಿದ್ದು, ಕೆಲವು ಪ್ರಕರಣಗಳು ಮುಕ್ತಾಯ ಗೊಂಡಿವೆ. ಕೆಲವು ಪ್ರಕರಣಗಳು ವಿಚಾರಣಾ ಹಂತದಲ್ಲಿದೆ ಎಂದರು. ವೀರಾಜಪೇಟೆ ತಾಲೂಕಿನ ಸ್ಫೂರ್ತಿ ಮಹಿಳಾ ಸಾಂತ್ವನ ಕೇಂದ್ರದ ಮೂಲಕ ನೊಂದ ಮಹಿಳೆಯರಿಗೆ ಸೇವಾ ಸೌಲಭ್ಯ ಕಲ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ಕೇಂದ್ರ ಆಡಳಿತಾಧಿಕಾರಿ ಪ್ರಭಾವತಿ ಅವರು ಕೊಡಗು ಜಿಲ್ಲಾ ಮಹಿಳಾ ಶಕ್ತಿ ಕೇಂದ್ರದ ಮೂಲಕ ಆಪ್ತ ಸಮಾಲೋಚನೆ, ಆಶ್ರಯ, ರಕ್ಷಣೆ, ಉದ್ಯೋಗ, ಮಾರ್ಗದರ್ಶನಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ವೀರಾಜಪೇಟೆ ತಾಲೂಕು ಡಿವೈಎಸ್‍ಪಿ ಜಯಕುಮಾರ್ ಅವರು ಮಹಿಳೆಯರ ರಕ್ಷಣೆ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು. ವಿಶೇಷಚೇತನ ಅಧಿಕಾರಿ ಸಂಪತ್ ಕುಮಾರ್, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸ್ವಾಮಿಗೌಡ, ಪೊನ್ನಂಪೇಟೆ ಸಿಡಿಪಿಒ ಸೀತಾಲಕ್ಷ್ಮಿ ಇತರರು ಇದ್ದರು.