ಮಡಿಕೇರಿ, ಡಿ. 21 : ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೊಡವ ಬಂಧುಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಕೊಡಗು ಬಂದ್ ಮಾಡಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು. 80ಕ್ಕೂ ಹೆಚ್ಚಿನ ಮಹಿಳೆಯರು ಹಾಗೂ ವಿವಿಧ ಕೊಡವ ಸಮಾಜ ಹಾಗೂ ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾದರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ, ಹೇಳಿಕೆಯನ್ನು ವಿರೋಧಿಸಿದರು. ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಸ್ವಾಭಿಮಾನಿ ಕೊಡವರ ಭಾವನೆಯನ್ನು ಸಿದ್ದರಾಮಯ್ಯ ಕೆರಳಿಸಿದ್ದಾರೆ. ಹಗುರುವಾದ ಹೇಳಿಕೆಯನ್ನು ನೀಡುವ ಮೂಲಕ ತೇಜೋವಧೆ ಮಾಡಿದ್ದಾರೆ. ಹೇಳಿಕೆಯನ್ನು ನೀಡಿ ಕ್ಷಮೆಯಾಚಿಸದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವುದು ಸರಿಯಲ್ಲ ಎಂದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯ ಪ್ರಜ್ಞಾವಂತಿಕೆಯಲ್ಲಿ ಮಾತನಾಡಬೇಕು; ಕೊಡಗಿನಲ್ಲಿ ಗೋವುಗಳನ್ನು ಪೂಜನೀಯ ಭಾವದಲ್ಲಿ ಆರಾಧಿಸುತ್ತೇವೆ. ಎತ್ತು ಪೋರಾಟ ನಡೆಸುತ್ತೇವೆ. ಗೃಹಪ್ರವೇಶದ ವೇಳೆ ಗೋವನ್ನು ಪೂಜಿಸುತ್ತೇವೆ. ಇದನ್ನು ತಿಳಿಯದ ಸಿದ್ದರಾಮಯ್ಯ ಮನಬಂದಂತೆ ಮಾತನಾಡಿ ಕೊಡವರ ಭಾವನೆಗೆ ಚ್ಯುತಿ ತಂದಿದ್ದಾರೆ. ಹೇಳಿಕೆ ಖಂಡಿಸಿ ದೇಶದ ಮೂಲೆಮೂಲೆಯಲ್ಲಿರುವ ಕೊಡವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬೇಕೆಂದು ಕರೆ ನೀಡಿದರು.
ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಟಿಪ್ಪು ಜಯಂತಿ ನಡೆಸಿ ಕೊಡಗಿನಲ್ಲಿ ಅಶಾಂತಿ ಸೃಷ್ಠಿಸಿದರು. ಇದೀಗ ಕೊಡವರ ವಿರುದ್ಧ ಹೇಳಿಕೆ ನೀಡಿ ಮತ್ತೊಮ್ಮೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಕೊಡಗಿಗೆ ಕಾಲಿಡ ಬಾರದು. ಬಹಿರಂಗ ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಕೊಡಗು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತನಾಡಿ, ರಾಜ್ಯಕ್ಕೆ ಬೇಡದ ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ನಡೆಸಿ ಪ್ರಕ್ಷುಬ್ಧ ವಾತಾವರಣ ಸೃಷ್ಠಿಸಿದರು. ಶಾಂತಿಪ್ರಿಯ ಕೊಡಗಿನಲ್ಲಿ ಎಂದೆಂದೂ ಆಗದ ಗಲಭೆ ಉಂಟಾಯಿತು. ಈ ವೇಳೆ ಕುಟ್ಟಪ್ಪ ಸಾವನ್ನಪ್ಪಿದರು. ಬಳಿಕ ಸಾವು ಆಕಸ್ಮಿಕವಾಗಿ ನಡೆದ ಘಟನೆ ಎಂದು ಸರ್ಕಾರದ ವರದಿ ಬಂತು. ಇದೀಗ ಮತ್ತೊಮ್ಮೆ ಕೊಡಗಿನವರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತ್ಯಂತ ಪೂಜ್ಯ ದೃಷ್ಟಿಯಲ್ಲಿ ಗೋವುಗಳನ್ನು ಕಾಣುವ ಕೊಡವರ ಮೇಲೆ ಇಲ್ಲಸಲ್ಲದ ಆರೋಪ ಮಾಡುವ ಸಿದ್ದರಾಮಯ್ಯ ವಿರುದ್ಧ ಎಲ್ಲಾ ಕೊಡವ ಸಮಾಜ ಕಾನೂನು ಹೋರಾಟ ಮಾಡಬೇಕೆಂದರು. ಕೊಡಗಿನ ದೇವಟ್ಟಿಪರಂಬು ನರಮೇದಕ್ಕೆ ಕಾರಣವಾದ ಟಿಪ್ಪು ಕುಟುಂಬಕ್ಕೆ ಸಿದ್ದರಾಮಯ್ಯ ಸೇರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಕೊಡವ ನಾಯಕರು