ಸೋಮವಾರಪೇಟೆ, ಡಿ. 20: ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬಿ.ಎಂ. ಬೆಳ್ಳಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಮತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. 18 ವರ್ಷ ತುಂಬಿದ ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತದಾನ ಮಾಡಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ಕಿವಿಮಾತು ಹೇಳಿದರು. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ ನೈತಿಕವಾಗಿ ಮತದಾನ ಮಾಡುವಂತೆ ತಮ್ಮ ನೆರೆಹೊರೆಯವರಿಗೆ ವಿದ್ಯಾರ್ಥಿಗಳು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕರಾದ ಕೆ.ಎಂ. ಚಂದ್ರಶೇಖರ್, ಹೇಮಕುಮಾರ್, ವಿ.ಜಿ. ಶಾಂತಿ, ಶಿವಪ್ರಕಾಶ್, ವಿನುತ, ರಮ್ಯ, ಎಂ.ಬಿ. ತಿಲೋತ್ತಮೆ, ಬಿ.ಬಿ. ಲಲಿತ, ಹೆಚ್.ಪಿ. ಶಮಂತ್, ಕೆ.ಎಂ. ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮತದಾನದ ಕುರಿತು ಕನ್ನಡ ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಇನ್ನಿತರ ಸ್ಪರ್ಧೆಗಳು ನಡೆದವು. ತಾಲೂಕಿನ ವಿವಿಧ ಕಾಲೇಜುಗಳ 55 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.