ಸೋಮವಾರಪೇಟೆ, ಡಿ. 20: ಸೋಮವಾರಪೇಟೆಯಿಂದ ಮಡಿಕೇರಿ ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ಬಸ್ಗಳ ಸಂಚಾರವನ್ನು ತಡೆಹಿಡಿಯುವ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ತಕ್ಷಣ ಸರ್ಕಾರಿ ಬಸ್ ಸೇವೆಯನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಪುತ್ತೂರು ವಿಭಾಗದ ಧರ್ಮಸ್ಥಳ ಘಟಕದಿಂದ ಸಂಚರಿಸುತ್ತಿದ್ದ ರೂಟ್ ನಂ. 5/6, ಬಿ.ಸಿ. ರೋಡ್ ಘಟಕದಿಂದ ಸಂಚರಿಸುತ್ತಿದ್ದ 55/66 ಮತ್ತು ಮಡಿಕೇರಿ ಘಟಕದಿಂದ ಸಂಚರಿಸುತ್ತಿದ್ದ ರೂಟ್ ನಂ. 179 ಬಸ್ಗಳನ್ನು ಕಡಿತಗೊಳಿಸಿದ್ದು, ಇದರಿಂದ ದಿನಂಪ್ರತಿ ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಬಸ್ಗಳ ಸೇವೆಯನ್ನು ಕಡಿತಗೊಳಿಸಿರುವದರಿಂದ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಚನ್ನರಾಯಪಟ್ಟಣ, ಅರಕಲಗೂಡು ವ್ಯಾಪ್ತಿಯ ಸಾರ್ವಜನಿಕರು ಸುಳ್ಯ, ಪುತ್ತೂರು, ಮಂಗಳೂರಿಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಮಾರ್ಗದ ಬಗ್ಗೆ ಯಾವದೇ ಗಮನ ಹರಿಸುತ್ತಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಇತರ ಜನಪ್ರತಿನಿಧಿಗಳು ಸೂಚನೆ ನೀಡಿದ್ದರೂ ಬಸ್ ಮಾರ್ಗವನ್ನು ಅಳವಡಿಸಿಲ್ಲ. ಈ ಹಿನ್ನೆಲೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಸಚಿವರಿಗೆ ಮತ್ತು ಮೇಲಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಸಾರ್ವಜನಿಕರಾದ ಬಿ.ಎಸ್. ಕುಮಾರ್, ಭಾಸ್ಕರ್, ಅಜೀಜ್, ರಾಮಚಂದ್ರ, ಸುಂದರ್ ಸೇರಿದಂತೆ ಇತರರು ತಿಳಿಸಿದ್ದಾರೆ.