ಕುಶಾಲನಗರ, ಡಿ 15: ಪಕ್ಷದ ಸಂಘಟನೆಗೆ ಮುಖಂಡರು ಸ್ಥಳೀಯ ವಾಗಿ ಆದ್ಯತೆ ನೀಡಬೇಕಾಗಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಸಚಿವ ಬಿ.ಎ. ಜೀವಿಜಯ ಕರೆ ನೀಡಿದ್ದಾರೆ.

ಕುಶಾಲನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಪಕ್ಷದ ನೀತಿ, ಸಿದ್ಧಾಂತ, ತತ್ವಗಳಿಗೆ ಬದ್ದರಾಗುವ ಮೂಲಕ ಪಕ್ಷದ ಬಲವರ್ಧನೆ ಸಾಧ್ಯ ಎಂದ ಬಿ.ಎ. ಜೀವಿಜಯ, ಪ್ರಾದೇಶಿಕ ಪಕ್ಷಗಳು ಒಗ್ಗೂಡುವ ಮೂಲಕ ಕಾಂಗ್ರೆಸ್‍ಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪಕ್ಷದ ಮುಖಂಡರು ಕಾರ್ಯಕರ್ತರ ಸಂಪರ್ಕ ಇಟ್ಟುಕೊಳ್ಳುವುದು ಅಗತ್ಯ. ಒಟ್ಟಾಗಿ ಸೇರಿ ಪಕ್ಷ ಚಟುವಟಿಕೆ ಆಗ ಬೇಕಾಗಿದೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ಗೆ ಜಿಲ್ಲೆಯ ಸಮಗ್ರ ಚಿತ್ರಣದ ಅರಿವಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಂತರ ಎಲ್ಲಾ ಸರಿಹೋಗಲಿದೆ. ಕಾಂಗ್ರೆಸ್ ಇತಿಹಾಸ ಮತ್ತೆ ಮರುಕಳಿಸ ಬೇಕಾಗಿದೆ ಎಂದರು. ಇತ್ತೀಚೆಗೆ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಬಿ.ಎ. ಜೀವಿಜಯ ಅವರನ್ನು ಕಾರ್ಯಕರ್ತರು ಹಾರ ಹಾಕಿ ಬರಮಾಡಿಕೊಂಡರು.

ಈ ಸಂದರ್ಭ ಪಟ್ಟಣ, ಬ್ಲಾಕ್ ಹಾಗೂ ಜಿಲ್ಲಾಮಟ್ಟದ ನಾಯಕರ ಬದಲಾವಣೆ ಹಾಗೂ ಪಕ್ಷದ ಸಂಘಟನೆ ಬಗ್ಗೆ ಕಾರ್ಯಕರ್ತರು ತಮ್ಮ ಅಹವಾಲನ್ನು ತೋಡಿಕೊಂಡರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಇಂಟೆಕ್ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಪ.ಪಂ. ಸದಸ್ಯರಾದ ಪ್ರಮೋದ್ ಮುತ್ತಪ್ಪ, ಪುಟ್ಟಲಕ್ಷ್ಮಿ, ಜಯಲಕ್ಷ್ಮಿ, ಪ್ರಮುಖರಾದ ಅಬ್ದುಲ್ ಖಾದರ್, ಶಿವಶಂಕರ್, ಕಿರಣ್ ಮತ್ತಿತರರು ಇದ್ದರು.