ಸೋಮವಾರಪೇಟೆ, ಡಿ. 15: ಗ್ರಾಮ ಪಂಚಾಯಿತಿ ಚುನಾವಣೆಗೆ ಅಖಾಡ ಸಿದ್ಧಗೊಂಡಿದ್ದು, ತಾಲೂಕಿನ 40 ಗ್ರಾಮ ಪಂಚಾಯಿತಿಗಳ 462 ಸ್ಥಾನಗಳಿಗೆ 1488 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೂ ಸೇರಿದಂತೆ ಬಂಡಾಯ ಸ್ಪರ್ಧಿಗಳು, ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 483 ಸ್ಥಾನಗಳಿದ್ದು, ಇದರಲ್ಲಿ 19 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ತೋಳೂರುಶೆಟ್ಟಳ್ಳಿಯ ಕೂತಿ ಗ್ರಾಮದಲ್ಲಿ ಚುನಾವಣೆಗೆ ಬಹಿಷ್ಕಾರ ಹಾಕಿರುವ ಹಿನ್ನೆಲೆ 2 ವಾರ್ಡ್‍ಗಳಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

ತಾಲೂಕಿನ ಸುಂಟಿಕೊಪ್ಪದ 20 ಸ್ಥಾನಗಳು ಹಾಗೂ ಕೂಡುಮಂಗಳೂರು ಗ್ರಾಪಂನ 24 ಸ್ಥಾನಗಳಿಗೆ ಅತೀ ಹೆಚ್ಚಿನ ಅಭ್ಯರ್ಥಿಗಳಿದ್ದು, ಈ ಎರಡು ಗ್ರಾ.ಪಂ.ನಲ್ಲಿ ತಲಾ 87 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇನ್ನು ಗರ್ವಾಲೆ ಗ್ರಾಪಂನ 5 ಸ್ಥಾನಗಳಿಗೆ ಕಡಿಮೆ ಸಂಖ್ಯೆ ಅಂದರೆ 14 ಮಂದಿ ಕಣದಲ್ಲಿದ್ದಾರೆ. ಕೆಲ ವಾರ್ಡ್‍ಗಳಲ್ಲಿ ಪರಿಶಿಷ್ಟ ಮಹಿಳೆಯರು ಲಭ್ಯವಿಲ್ಲದ ಕಾರಣ 19 ರಲ್ಲಿ 6 ಮಂದಿ ಪರಿಶಿಷ್ಟ ಪಂಗಡದ ಮಹಿಳೆಯರು ಮೀಸಲಾತಿ ಹಿನ್ನೆಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಂಡ್ಲಿ ಗ್ರಾಮ ಪಂಚಾಯಿತಿಗೆ ಮಾದೇವಿ (ಪರಿಶಿಷ್ಟ ಪಂಗಡ ಮಹಿಳೆ), ನಿಡ್ತ ಗ್ರಾ.ಪಂ ಬಿ.ಜಿ. ಸುಮಿತ್ರ (ಪ. ಪಂಗಡದ ಮಹಿಳೆ), ತೋಳೂರುಶೆಟ್ಟಳ್ಳಿ ಉಷಾ (ಪ.ಪಂ.ಮಹಿಳೆ), ಚೌಡ್ಲು ದಿವ್ಯ ಕೆ.ಎಸ್. (ಪ.ಪಂ ಮಹಿಳೆ), ಪರಮೇಶ್ (ಮಹೇಶ್ ತಿಮ್ಮಯ್ಯ) (ಬಿಸಿಎಂ.ಬಿ), ನೇರುಗಳಲೆ ಎಂ.ಎಸ್. ಕವಿತ (ಬಿಸಿಎಂ. ಎ ಮಹಿಳೆ), ಎಚ್. ಕೆ. ವಿನೋದ್‍ಕುಮಾರ್ (ಬಿಸಿಎಂ ಬಿ) ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗಣಗೂರು ಗ್ರಾ.ಪಂ.ನಲ್ಲಿ ವಿರೂಪಾಕ್ಷ (ಬಿಸಿಎಂ ಬಿ ಸಾಮಾನ್ಯ), ಕೂಡಿಗೆ ಕೆ.ಎಸ್. ಶಿವಕುಮಾರ (ಬಿಸಿಎಂ ಬಿ), ಹೆಬ್ಬಾಲೆ ಎಸ್.ಕೆ. ಕವಿತ (ಬಿಸಿಎಂ ಎ ಮಹಿಳೆ), ಕೊಡಗರಹಳ್ಳಿ ಎಚ್.ಇ.ಅಬ್ಬಾಸ್ (ಸಾಮಾನ್ಯ), ಎನ್.ಬಿ. ನಿರತ (ಸಾಮಾನ್ಯ ಮಹಿಳೆ). ಹರದೂರು ಎಸ್.ಎನ್. ಸೌಮ್ಯ (ಪ.ಪಂ ಮಹಿಳೆ), ಕುಸುಮ (ಪ ಜಾತಿ ಮಹಿಳೆ), ಮಾದಾಪುರ ಗ್ರಾ.ಪಂ ಬಿ.ಎಸ್. ಭಾರತಿ (ಬಿಸಿಎಂ ಎ ಮಹಿಳೆ), ಎ. ಭಾಗೀರಥಿ (ಪ.ಪಂ ಮಹಿಳೆ), ಎಂ.ಜಿ. ಸೋಮಣ್ಣ (ಬಿಸಿಎಂ ಬಿ ಸಾಮಾನ್ಯ), ಗರ್ವಾಲೆ ಗ್ರಾ. ಪಂ. ನೇತ್ರಾವತಿ ಬಾಯಿ (ಪ.ಪಂ ಮಹಿಳೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈವರೆಗೆ ಸೋಮವಾರಪೇಟೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆಗಳು ಇದೇ ಪ್ರಥಮ ಬಾರಿಗೆ ಕುಶಾಲನಗರಕ್ಕೆ ವರ್ಗಾವಣೆಗೊಂಡಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯ ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ತಾ. 22 ರಂದು ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮತಪೆಟ್ಟಿಗೆಗಳನ್ನು ಸೋಮವಾರಪೇಟೆ ತಾಲೂಕು ಕಚೇರಿ ಆವರಣದಲ್ಲಿ ಸಿಬ್ಬಂದಿಗಳು ಸಿದ್ಧಪಡಿಸಿದ್ದಾರೆ.