ವೀರಾಜಪೇಟೆ, ಡಿ: 15: ದಕ್ಷಿಣ ಭಾರತ ಟೀಮ್ ಹೆಚ್.ಟಿ.ಜೆಡ್. ಸಂಸ್ಥೆಯ ವಾರ್ಷಿಕ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ 2.ಸ್ಟ್ರೋಕ್ ದ್ವಿಚಕ್ರ ವಾಹನ ಸವಾರರಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

‘ಹೆಲ್ಮೆಟ್ ಬಳಸಿ ಜೀವ ಉಳಿಸಿ’ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ವಾಹನ ಜಾಥಾಗೆ ವೀರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೇಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಲಾಖೆಯ ವತಿಯಿಂದ ಡಿಸೆಂಬರ್ ತಿಂಗಳು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದ್ದು, ಇಲಾಖೆಯೊಂದಿಗೆ ಹೆಚ್.ಟಿ.ಜೆಡ್. ಸಂಸ್ಥೆ ಕೈಜೋಡಿಸಿ ಜಂಟಿಯಾಗಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ತಮ್ಮ ಜೀವಕ್ಕೆ ಬೆಲೆ ನೀಡುವ ನಿಟ್ಟಿನಲ್ಲಿ ಇಲಾಖೆಯಿಂದ ಹೊರಡಿಸಲಾದ ಕಾನೂನು ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ತಾಲೂಕು ಮೈದಾನ ದಲ್ಲಿ ನಡೆದ ಸರಳ ಸಮಾರಂಭದಲ್ಲಿ 2. ಸ್ಟ್ರೋಕ್ ಕೂರ್ಗ್ ಓಪನ್ ಕ್ಲಾಸ್‍ನಲ್ಲಿ 2013, 14 ಮತ್ತು 15 ವರ್ಷದಲ್ಲಿ ನಡೆದ ರ್ಯಾಲಿಯಲ್ಲಿ ವಿಜೇತರಾಗಿ ಹೊರ ಹೊಮ್ಮಿದ ಮುಂಡಚಾಡೀರ ಸೂರಜ್ ಮಂದಣ್ಣ ಮತ್ತು ‘ರೈಡ್ ದಿ ಹಿಮಾಲಯ ರ್ಯಾಲಿಯಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಪಡೆದ ಮಾಳೇಟಿರ ಚೇತನ್ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು. ಇವರನ್ನು ಆಯೋಜಕರು ಸನ್ಮಾನಿಸಿದರು. ಜಾಗೃತಿ ಜಾಥಾದಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ವಿವಿಧ ಸ್ಥಳ ಗಳಿಂದ 100ಕ್ಕೂ ಅಧಿಕ ದ್ವಿಚಕ್ರ ವಾಹನ ಸವಾರರು ಭಾಗವಹಿಸಿದ್ದರು. ಕೊಡಗಿನ ಮಹಿಳಾ ದ್ವಿಚಕ್ರ ಸವಾರ ರಾದ ಪೆÇನ್ನಂಪೇಟೆಯ ಆಶೀನ್ ಬೊಳ್ಳಮ್ಮ ಮತ್ತು ಕುಶಾಲನಗರದ ಅಶ್ವಿನಿ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು. ನಿಧಾನ ಗತಿಯ ಸ್ಪರ್ಧೆಯಲ್ಲಿ ಕೊಡಗಿನ ರಿಶಭ್ ಮತ್ತು ತಮಿಳುನಾಡಿನ ವೆಲ್ಲೂರಿನ ಸಯೈದ್ ಜುನೈದ್ ಪ್ರಥಮ ಸ್ಥಾನ ಪಡೆದು ಕೊಂಡರು. ಬಳಿಕ ದ್ವಿಚಕ್ರ ವಾಹನ ಸವಾರರಿಂದ ಸಾಹಸ ಪ್ರದರ್ಶನ ನಡೆದವು. ಹೆಚ್.ಟಿ.ಜೆಡ್. ಸಂಸ್ಥೆಯ ಕರ್ನಾಟಕ ವಲಯ ಆಯೋಜಕರಾದ ಆನ್ಸನ್, ನಾವಜ್, ಫಹಾದ್, ಸುಮನ್ ಮತ್ತು ಅಜಿತ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಹೆಚ್.ಟಿ.ಜೆಡ್. ಸಂಸ್ಥೆಯ ಸದಸ್ಯರು ಹಾಜರಿದ್ದರು.