ಮಡಿಕೇರಿ, ಡಿ. 11: ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಬಂಟ್ಸ್ ವತಿಯಿಂದ ಜ. 1 ರಿಂದ 3 ರವರೆಗೆ ಐಪಿಎಲ್ ಮಾದರಿಯಲ್ಲಿ ‘ಬಂಟ್ಸ್ ಪ್ರೀಮಿಯರ್ ಲೀಗ್-2021’ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲೀಗ್‍ನ ಆಯೋಜಕ ಬಿ.ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈನಿಕ ಹಾಗೂ ಕ್ರೀಡಾ ಪರಂಪರೆಗೆ ಹೆಸರುವಾಸಿಯಾದ ಕೊಡಗಿನಲ್ಲಿ, ಇದೇ ಪ್ರಥಮ ಬಾರಿಗೆ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪಂದ್ಯಾವಳಿಯಲ್ಲಿ ಬಂಟ್ಸ್ ಜಾಗ್ವಾರ್ಸ್, ಬೊಟ್ಲಪ್ಪ ಬಂಟ್ಸ್ ಚಾಲೆಂಜರ್ಸ್, ನೀಲುಮಾಡು ವಾರಿಯರ್ಸ್, ಬಂಟ್ಸ್ ಆವೆಂಜರ್ಸ್ ಹಾಕತ್ತೂರು, ಮಲೆನಾಡು ಪ್ಯಾಂಥರ್ಸ್, ರೋರಿಂಗ್ ಬಂಟ್ಸ್ ಕುಶಾಲನಗರ, ಸುರಭಿ ಸೂಪರ್ ಕಿಂಗ್ಸ್, ಬಂಟ್ಸ್ ಬ್ರಿಗೇಡ್ ಮಡಿಕೇರಿ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಲೀಗ್ ಮಾದರಿಯಲ್ಲಿ ಒಟ್ಟು 32 ಪಂದ್ಯಗಳು ನಡೆಯಲಿದೆ ಎಂದರು.

ಪಂದ್ಯಾವಳಿ ವಿಜೇತ ತಂಡಕ್ಕೆ ರೂ. 1 ಲಕ್ಷ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 50 ಸಾವಿರ ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ಟ್ರೋಫಿ ನೀಡಲಾಗುವುದು ಎಂದರು.

ಆಟಗಾರರ ಹರಾಜು- ತಾ. 12 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೊಟೇಲ್ ಸಮುದ್ರದಲ್ಲಿ ಫ್ರಾಂಚೈಸಿಗಳ ಮೂಲಕ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯನ್ನು ವೀಕ್ಷಿಸಲು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಃUಓಖಿS PಖಇಒIಇಖ ಐಇಂಉUಇ ಅಔಔಖಉ ನಲ್ಲಿ ಫೇಸ್‍ಬುಕ್ ಲೈವ್ ಹಾಗೂ ಯೂಟ್ಯೂಬ್‍ನಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೀಪಕ್ ರೈ- 9900102646, ಪ್ರಜೀತ್ ರೈ-9886311993, ಅವಿನಾಶ್ ರೈ 9731155867 ಸಂಪರ್ಕಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕ ರಾದ ಬಿ.ಸಿ. ದೀಪಕ್ ರೈ, ಬಿ.ಎಸ್. ಪ್ರಜೀತ್ ರೈ, ಬಿ.ಪಿ. ಕಿರಣ್ ರೈ, ಬಿ.ಸಿ. ಅವಿನಾಶ್ ರೈ ಹಾಗೂ ಬಿ.ಎಸ್. ಜಗನ್ನಾಥ್ ರೈ ಉಪಸ್ಥಿತರಿದ್ದರು.