ಸೋಮವಾರಪೇಟೆ, ಡಿ.11: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ.13 ರಂದು ಪೂರ್ವಾಹ್ನ 10 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಮಾದಪ್ಪ ತಿಳಿಸಿದರು.
ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು 101ನೇ ವರ್ಷವನ್ನು ಪೂರೈಸಿ ಪ್ರಗತಿ ಪಥದತ್ತ ಸಾಗುತ್ತಿದೆ. 2019-20ನೇ ಸಾಲಿಗೆ 80.65ಲಕ್ಷ ಲಾಭವನ್ನು ಗಳಿಸಿದೆ ಎಂದರು.
2020ನೇ ಮಾರ್ಚ್ ಅಂತ್ಯಕ್ಕೆ 28.59 ಕೋಟಿ ಠೇವಣಿ ಸಂಗ್ರಹಣೆಯಾಗಿರುತ್ತದೆ. ಶೇ.98ರಷ್ಟು ಸಾಲ ಮರುಪಾವತಿಯಾಗಿರುತ್ತದೆ. ಸ್ವಸಹಾಯ ಗುಂಪು ಹಾಗು ರೈತಕೂಟಗಳ ಯೋಜನೆಯನ್ನು ಸಂಘದ ವತಿಯಿಂದ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, 44 ಗುಂಪುಗಳು ಕಾರ್ಯನಿರತವಾಗಿವೆ. ದಶಕಗಳಿಂದಲೂ ಸಂಘವು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ “ಎ” ತರಗತಿ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಸೋಂಕು ತಡೆಗಟ್ಟಲು ಶ್ರಮಿಸುತ್ತಿರುವ ಕೊರೊನಾ ಸೇನಾನಿಗಳಾದ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರಿಗೆ ಸಂಘದ ಮೂಲಕ ಪ್ರೋತ್ಸಾಹ ಧನ ನೀಡಲಾಗಿದೆ. ಜಂಟಿ ಬಾಧ್ಯತಾ ಗುಂಪುಗಳಿಗೆ 1ಕೋಟಿ ರೂ. ಸಾಲ ನೀಡಲಾಗಿದೆ. ಪ್ರಧಾನಮಂತ್ರಿ ಆತ್ಮ ನಿರ್ಭರ್ ಭಾರತ್ ಕಾರ್ಯಕ್ರಮದ ಅಂಗವಾಗಿ ಮಹಾಸಭೆಯ ದಿನದಂದು ಸಂಘದ ಸದಸ್ಯರಿಗೆ ತರಕಾರಿ ಬೀಜಗಳನ್ನು ವಿತರಿಸಲಾಗುವುದು. ಕಾಫಿ ಮತ್ತು ಕಾಳುಮೆಣಸಿಗೆ ಸಂಬಂಧಿಸಿದಂತೆ ಕೆಸಿಸಿ ಸಾಲದ ಎನ್ಸಿಎಲ್ ಮಿತಿಯನ್ನು 1 ಏಕರೆಗೆ 95 ಸಾವಿರ ರೂ.ಗೆ ಏರಿಸಲಾಗಿದೆ. ಜಾಮೀನು ಸಾಲದ ಬಡ್ಡಿದರವನ್ನು ಶೇ.12ರಿಂದ 10ಕ್ಕೆ ಇಳಿಸಲಾಗಿದೆ ಎಂದರು.
ಜಾಮೀನು ಸಾಲ, ಪಿಗ್ಮಿ ಓವರ್ ಡ್ರಾಫ್ಟ್ ಸಾಲಗಾರರಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. ಅಬ್ಬೂರುಕಟ್ಟೆ ಶಾಖೆಯಲ್ಲಿ ಗೋದಾಮು ಮತ್ತು ವಾಣಿಜ್ಯ ಸಂಕೀರ್ಣಗಳನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರಾದ ಬಿ.ಎಂ.ಸುರೇಶ್, ರೂಪ ಸತೀಶ್, ಬಿ.ಶಿವಪ್ಪ ಉಪಸ್ಥಿತರಿದ್ದರು.