ನಾಪೆÇೀಕ್ಲು, ಡಿ. 11: ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿಗೆ ಒಳಪಟ್ಟ ಯವಕಪಾಡಿ ಗ್ರಾಮದಲ್ಲಿ ರುವ ಕೊಡಗಿನ ಅತೀ ಎತ್ತರದ ಬೆಟ್ಟವಾದ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವೇಶಿಸಲು ಅರಣ್ಯ ಇಲಾಖೆ ಸ್ಥಳೀಯರಿಂದ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡಿಯಂಡಮೋಳ್ ಬೆಟ್ಟ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರಮುಖವಾದದು. ಇಲ್ಲಿಗೆ ದಿನಂಪ್ರತಿ ನೂರಾರು ಜನ ಪ್ರವಾಸಿಗರು, ಬೆಟ್ಟ ಚಾರಣಿಗರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ತಡಿಯಂಡಮೋಳ್ ಬೆಟ್ಟ ಪ್ರವೇಶದಲ್ಲಿ ಅರಣ್ಯ ಇಲಾಖೆ ತಪಾಸಣಾ ಗೇಟ್ ನಿರ್ಮಿಸಿ ಬೆಟ್ಟಕ್ಕೆ ಭೇಟಿ ನೀಡುವವರಿಂದ ತಲಾ 100 ರೂ. ವಸೂಲು ಮಾಡುತ್ತಿದೆ. ಆದರೆ, ಸ್ಥಳೀಯ ನಿವಾಸಿಗಳು ಕೂಡ ಗೇಟ್ ದಾಟಬೇಕಾದರೆ ರೂ. 100 ನೀಡಬೇಕಾಗಿದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಗಿರಿಜವರು ವಾಸವಾಗಿದ್ದಾರೆ. ಗಿರಿಜನರು ತಡಿಯಂಡಮೋಳ್ ಪ್ರವೇಶ ಮಾಡಲು ದಿನಕ್ಕೆ ರೂ. 100 ನೀಡಬೇಕಾಗಿರುವದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯರ ಜಾಗದಲ್ಲಿ ರಸ್ತೆ

ವಿಪರ್ಯಾಸ ಎಂದರೆ ತಡಿಯಂಡಮೋಳ್ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ಬಹುತೇಕ ಅರೆಯಡ ಮತ್ತು ಅಪ್ಪಾರಂಡ ಕುಟುಂಬಸ್ಥರು ಬಿಟ್ಟುಕೊಟ್ಟಿರುವ ಜಾಗವಾಗಿದೆ. ಆದರೆ, ಆ ಕುಟುಂಬದ ಸದಸ್ಯರು ತಡಿಯಂಡಮೋಳ್ ಬೆಟ್ಟದ ಕಡೆಗೆ ತೆರಳಲು ರೂ. 100 ನೀಡಬೇಕಾಗಿ ರುವದು ವಿಪರ್ಯಾಸ ಎನಿಸಿದೆ.

ಪ್ರವಾಸಿಗರಿಂದ ಹಣ ಪಡೆಯಲಿ

ಪ್ರವಾಸಿಗರಿಂದ ಹಣ ಪಡೆಯುವದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸ್ಥಳೀಯರು ಗೇಟ್ ದಾಟಲು ಹಣ ನೀಡುವದು ಎಷ್ಟು ಸರಿ ಎಂಬುದು ಸ್ಥಳೀಯ ಗ್ರಾಮಸ್ಥರ ಪ್ರಶ್ನೆ.

ದಾಖಲಾತಿ ನೀಡಬೇಕು

ತಡಿಯಂಡಮೋಳ್ ಬೆಟ್ಟಕ್ಕೆ ಹೊಂದಿಕೊಂಡಂತೆ 44 ಕುಟುಂಬಸ್ಥರ ಜಮ್ಮಾ ಮಲೆ ಇದೆ. ಇಲ್ಲಿಗೆ ಸಾಗುವ ಜಾಗದ ಮಾಲೀಕರು, ಕಾರ್ಮಿಕರು ಜಾಗದ ದಾಖಲಾತಿ ನೀಡಬೇಕು ಎನ್ನುವದು ಎಷ್ಟರ ಮಟ್ಟಿಗೆ ಸರಿ. ಇವರ ಪ್ರಕಾರ ಇಲ್ಲಿಗೆ ಬರುವ ಎಲ್ಲರೂ ಜೊತೆಯಲ್ಲಿ ಜಾಗದ ದಾಖಲಾತಿ ಇಟ್ಟುಕೊಂಡಿರಬೇಕು. ಇದು ಯಾವ ಕಾನೂನು ಎಂಬದು ಗ್ರಾಮಸ್ಥರ ಮತ್ತೊಂದು ಪ್ರಶ್ನೆ.

ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

- ಪಿ.ವಿ. ಪ್ರಭಾಕರ್