ಸುಂಟಿಕೊಪ್ಪ, ಡಿ. 10: ಮಕ್ಕಳಲ್ಲಿ ಸಾಹಿತ್ಯ ಜ್ಞಾನದೊಂದಿಗೆ ಕನ್ನಡ ಭಾಷೆಯನ್ನು ಗಟ್ಟಿ ಮಾಡುವ ಕೆಲಸ ಆಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.

ಇಲ್ಲಿನ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಗೌರವ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ವಿಶ್ವದಲ್ಲಿಯೇ ಅತೀ ಪ್ರಾಚೀನ ಭಾಷೆಯಾಗಿದೆ. ಬ್ರಿಟಿಷರ ಆಳ್ವಿಕೆ ಬಂದ ನಂತರ ಕನ್ನಡ ಭಾಷೆ ಆಂಗ್ಲ ಭಾಷೆಯ ಅತಿಕ್ರಮಣದಿಂದ ಕ್ಷೀಣಿಸುತ್ತಾ ಬಂದಿದೆ. ಮಕ್ಕಳು ಓದು ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕನ್ನಡ ಭಾಷೆ ಸಂಸ್ಕಾರ ಸಂಸ್ಕøತಿಯನ್ನು ಉಳಿಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೀರಾ ಡಿಸೋಜ ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಕನ್ನಡ ಭಾಷೆ ಬೆಳೆಯಬೇಕಾದರೆ ಅದರ ಬಳಕೆಯನ್ನು ಹೆಚ್ಚಾಗಿ ಮಾಡಬೇಕು ಎಂದರು. ನಿಕಟಪೂರ್ವ ಅಧ್ಯಕ್ಷ ವಹೀದ್ ಜಾನ್, ವರ್ತಕರ ಸಂಘದ ಅಧ್ಯಕ್ಷ ಡಿ. ನರಸಿಂಹ. ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಿಂದ ಕನ್ನಡ ಭಾಷಾ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಕ್ಕಳನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಕಸಾಪ ಅಧ್ಯಕ್ಷ ಎಂ.ಎಸ್. ಸುನೀಲ್ ವಹಿಸಿದ್ದರು. ವೇದಿಕೆಯಲ್ಲಿ ಬಾಲಕಿ ಶ್ರೀಜಾ ಪ್ರಾರ್ಥಿಸಿ, ಕಾರ್ಯದರ್ಶಿ ಆರ್. ಸತೀಶ್ ಶೇಟ್ ಸ್ವಾಗತಿಸಿ, ಸದಸ್ಯ ಅಶೋಕ್ ಶೇಟ್ ವಂದಿಸಿದರು.