ವೀರಾಜಪೇಟೆ, ಡಿ. 10: ರಾಜ್ಯ ಚುನಾವಣಾ ಆಯೋಗವು ತಾಲೂಕಿನ 35 ಗ್ರಾಮ ಪಂಚಾಯಿತಿಗಳ ಚುನಾವಣೆ ಘೋಷಿಸಿರುವ ಹಿನ್ನೆಲೆ ಇಲ್ಲಿನ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಯ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ಎರಡನೇ ಹಂತದ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ತಾ. 27 ರಂದು ವೀರಾಜಪೇಟೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಯಲಿದ್ದು ತಾಲೂಕಿನ ಸುಮಾರು 35 ಗ್ರಾಮ ಪಂಚಾಯಿತಿಯ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಮಾಸ್ಟರ್ ಟ್ರೈನರ್‍ಗಳಾಗಿ ಉಪನ್ಯಾಸಕರುಗಳಾದ ದಿವಾಕರ್, ಡಾ. ಸೋಮಣ್ಣ ಹಾಗೂ ಮಂಜುನಾಥ್ ಎಲ್ಲ ಚುನಾವಣಾಧಿಕಾರಿಗಳಿಗೆ ತರಬೇತಿ ಹಾಗೂ ಮಾಹಿತಿ ನೀಡಿದರು.

ತಾ. 13 ರಿಂದ ಗ್ರಾಮ ಪಂಚಾಯಿತಿಗಳ ಪ್ರಕ್ರಿಯೆ ಆರಂಭವಾಗಲಿದ್ದು, ಗ್ರಾಮ ಪಂಚಾಯಿತಿಗಳ ಚುನಾವಣೆಗಾಗಿ ಇಲ್ಲಿನ ತಾಲೂಕು ಕಚೇರಿಯಲ್ಲಿ ಚುನಾವಣಾ ವಿಭಾಗದಲ್ಲಿ ಚುನಾವಣಾ ಪೂರ್ವ ಸಿದ್ಧತೆ ನಡೆಯುತ್ತಿದೆ.