ಸಿದ್ದಾಪುರ, ಡಿ. 10: ಸಿದ್ದಾಪುರದ ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿ ಪಥದತ್ತ ದಾಪುಗಾಲು ಇಡುತ್ತಿದ್ದು, 2019-20ನೇ ಸಾಲಿನಲ್ಲಿ ಸಂಘವು ರೂ. 91 ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 22 ಡಿವಿಡೆಂಟ್ ನೀಡಲಾಗುವುದು ಎಂದು ಅಗಸ್ತೇಶ್ವರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು.

ಸಿದ್ದಾಪುರದ ಸೆಂಟಿನರಿ ಹಾಲ್ ಸಭಾಂಗಣದಲ್ಲಿ 2019-20ನೇ ಸಾಲಿನ 90ನೇ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ವತಿಯಿಂದ ನಡೆಯುತ್ತಿರುವ ಎಲ್ಲಾ ವ್ಯವಹಾರಗಳು ಉತ್ತಮವಾಗಿ ನಡೆಯುತ್ತಿದ್ದು, ಸಂಘ ಪಾಲು ಬಂಡವಾಳ ರೂ. 174.14 ಲಕ್ಷಗಳಿದ್ದು, 2019-20ನೇ ಸಾಲಿನಲ್ಲಿ ರೂ. 166.08 ಕೋಟಿ ವ್ಯವಹಾರ ನಡೆಸಲಾಗಿದ್ದು, ಸಂಘದಲ್ಲಿ ದುಡಿಯುವ ಬಂಡವಾಳ ರೂ. 36.65 ಕೋಟಿ ಆಗಿರುತ್ತದೆ ಎಂದು ಮಾಹಿತಿ ನೀಡಿದರು. ಸಂಘವು ಪ್ರತಿ ವರ್ಷದಂತೆ ಈ ಬಾರಿಯು ಶೇ. 100 ರಷ್ಟು ಫಸಲು ಸಾಲ ವಸೂಲಾತಿ ಮಾಡಿರುತ್ತದೆ ಎಂದರು. ಸಂಘದ ವತಿಯಿಂದ ನಡೆಸುತ್ತಿರುವ ಡೀಸೆಲ್, ಪೆಟ್ರೋಲ್ ವ್ಯವಹಾರಗಳಲ್ಲಿ ರೂ. 17.48 ಕೋಟಿ ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಿದರು. ಸಂಘವು 2019-20ನೇ ಸಾಲಿನಲ್ಲಿ ರೂ. 91.26 ಲಕ್ಷ ನಿವ್ವಳ ಲಾಭ ಗಳಿಸಿದ್ದು 2020 ಮಾರ್ಚ್ ತಿಂಗಳಿನಲ್ಲಿ ಕೋವಿಡ್ 19 ಮಹಾರೋಗ ದೇಶವ್ಯಾಪಿ ಹರಡಲು ಶುರುವಾದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ರೋಗ ತಡೆಯುವ ನಿಟ್ಟಿನಲ್ಲಿ ಎಲ್ಲಾ ಕೃಷಿ ಹಾಗೂ ಕೃಷಿಯೇತರ ಸಾಲಗಳ ಕಂತು ಹಾಗೂ ಪೂರ್ಣ ಸಾಲವನ್ನು ಮರುಪಾವತಿಸಲು ಕಳೆದ ಆಗಸ್ಟ್ 2020 ರವರೆಗೆ ಕಾಲಾವಕಾಶ ನೀಡಿರುವುದರಿಂದ ಸಮಯಕ್ಕೆ ಸರಿಯಾಗಿ ಸಾಲ ಮತ್ತು ಬಡ್ಡಿ ಮರುಪಾವತಿಯಾಗದೆ ಲಾಭದಲ್ಲಿ ಇಳಿಮುಖವಾಗಿದೆ. ಸಾಲ ವಿತರಣೆ ಹೆಚ್ಚಾಗಿದ್ದು ಅದರಿಂದ ಪಾಲು ಹಣ ಹೆಚ್ಚಾಗಿದೆ ಎಂದರು. ಸುಸ್ತಿ ಸಾಲವು ಹೆಚ್ಚಾಗಿದೆ. ಆದರಿಂದ ಲಾಭ ಹಂಚಿಕೆಯಲ್ಲಿ ಗರಿಷ್ಠ ಶೇ. 22 ರ ಡಿವಿಡೆಂಟ್ ಹಂಚಲು ತೀರ್ಮಾನಿಸ ಲಾಗಿದೆ ಎಂದು ತಿಳಿಸಿದರು. ಸಂಘದ ವತಿಯಿಂದ ಧರ್ಮಾರ್ಥ ನಿಧಿಯಿಂದ 2019-20ನೇ ಸಾಲಿನಲ್ಲಿ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ತಲಾ ರೂ. 2000 ದಂತೆ ಹಾಗೂ ಪದವಿಯಲ್ಲಿ ಶೇ. 70 ಹಾಗೂ ಸ್ನಾತಕೋತರ ಪದವಿಯಲ್ಲಿ ಶೇ. 60 ಅಂಕ ಪಡೆದವರಿಗೆ ತಲಾ ರೂ. 5000 ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು. ಸಂಘದ ಸದಸ್ಯರಾಗಿದ್ದು ಮರಣಪಟ್ಟ ಸದಸ್ಯರಿಗೆ ರೂ. 5000 ಅಂತ್ಯಕ್ರಿಯೆಗೆ ಸಹಾಯಧನ ನೀಡಲಾಗುತ್ತದೆ ಎಂದರು. ಈವರೆಗೆ ಸಂಘದ ಧರ್ಮಾರ್ಥ ನಿಧಿಯಿಂದ ರೂ. 1.65 ಲಕ್ಷ ವಿತರಿಸ ಲಾಗಿದೆ ಎಂದರು. ಸಂಘದ ವತಿಯಿಂದ ಎಂ.ಜಿ. ರಸ್ತೆಯಲ್ಲಿ ರೂ. 50 ಲಕ್ಷ ವೆಚ್ಚದ ಗೋದಾಮು ನಿರ್ಮಾಣ ಮಾಡಲಾಗುತ್ತಿದ್ದು, ಕರಡಿಗೋಡು ರಸ್ತೆಯಲ್ಲಿರುವ ಸಂಘದ ಜಾಗದಲ್ಲಿ ನೂತನ ಕಟ್ಟಡದ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಾಗಿರುವವರು ಕನಿಷ್ಟ ವ್ಯವಹಾರಗಳನ್ನು ಸಂಘದಲ್ಲಿ ಮಾಡಬೇಕೆಂದು ಆದೇಶ ಬಂದಿದ್ದು, ಪ್ರತಿಯೊಬ್ಬ ಸದಸ್ಯರು ಸಂಘದಲ್ಲಿ ವ್ಯವಹಾರ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭ ಸಂಘದಲ್ಲಿ ಉತ್ತಮ ವ್ಯವಹಾರ ಮಾಡಿದ ಕರಡಿಗೋಡು ಗ್ರಾಮದ ಕುಕ್ಕುನೂರು ಜಯರಾಮ್ ಹಾಗೂ ಗುಹ್ಯ ಗ್ರಾಮದಿಂದ, ಗೋಪಿನಾಥ್ ಹಾಗೂ ಕೃಷಿಕರಾದ ಪಂದಿಕಂಡ ಚಂಗಪ್ಪ, ಚೇನಂಡ ಉತ್ತಯ್ಯ ರವರನ್ನು ಹಾಗೂ ಉತ್ತಮ ವ್ಯವಹಾರ ನಡೆಸಿದ ಮೂರು ಸ್ವ-ಸಹಾಯ ಸಂಘಗಳಿಗೆ ಬಹುಮಾನ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ. ಬಿಜಾಯ್, ನಿರ್ದೇಶಕರುಗಳಾದ ಕೆ.ಕೆ. ಚಂದ್ರಕುಮಾರ್, ಕೆ.ಡಿ. ನಾಣಯ್ಯ, ಕೆ.ಜಿ. ಈರಪ್ಪ, ಪಿ.ಕೆ. ಚಂದ್ರನ್, ಕೆ.ಎಸ್. ಸುನಿಲ್, ಎಂ.ಹೆಚ್. ಮೂಸ, ಎಂ.ಸಿ. ವಾಸು, ಹೆಚ್.ಕೆ. ಚೆಲುವಯ್ಯ, ಹೆಚ್.ಬಿ. ಪ್ರತೀಶ್, ಎಂ.ಸಿ. ಪ್ರಮೀಳ, ಎಂ.ಸಿ. ಪಾರ್ವತಿ, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಬಿ. ಪ್ರಸನ್ನ, ಹಾಜರಿದ್ದರು. ಕೆ.ಆರ್. ಮೋಕ್ಷಿತ ತಂಡ ಪ್ರಾರ್ಥಿಸಿ, ಪಾರ್ವತಿ ಸ್ವಾಗತಿಸಿ, ಕೆ.ಎಸ್. ಸುನಿಲ್ ವಂದಿಸಿದರು.