ಮಡಿಕೇರಿ, ಡಿ. 10 : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮಡಿಕೇರಿ ನಗರದಲ್ಲಿ 2016ನೇ ಇಸವಿಯಿಂದ ಅನುಷ್ಠಾನಗೊಳಿಸುತ್ತಿರುವ ಯು.ಜಿ.ಡಿ. ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರಲು ಸಾರ್ವಜನಿಕರಿಂದ ಅಡಚಣೆಯಾಗುತ್ತಿರುವದು ಕಾರಣವಂತೆ.

ಈ ಮಾಹಿತಿಯನ್ನು ನೀಡಿದವರು ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು ಅವರು. ವಿಧಾನ ಪರಿಷತ್‍ನಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರು ಈ ಕುರಿತು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸಚಿವರು ಕಾಮಗಾರಿ ಪೂರ್ಣಗೊಳ್ಳದಿರಲು ನೀಡಿರುವ ಕಾರಣ ಇಂತಿದೆ. 2012ರಲ್ಲಿ ಆಡಳಿತಾತ್ಮಕ ಅನುಮೋದನೆಯಾಗಿ 2016ರಿಂದ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 15 ಕಿ.ಮೀ. ಉದ್ದಕ್ಕೆ ಕಾಂಕ್ರೀಟ್ ಮತ್ತು ಡಾಂಬರು ರಸ್ತೆಗಳನ್ನು ಕತ್ತರಿಸಿ ಕೊಳವೆ ಸಾಲುಗಳನ್ನು ಅಳವಡಿಸಲು ಸಾರ್ವಜನಿಕರಿಂದ ಅಡಚಣೆಯಿದೆ. ರಾಜಶೇಖರ್ ಹೋಂ ನೀಡ್ಸ್ ಬಳಿ ವೆಟ್‍ವೆಲ್ ಮತ್ತು ಸೆಫ್ಟಿಕ್ ಟ್ಯಾಂಕ್ ನಿರ್ಮಾಣ ಮಾಡಲು ನಗರಸಭೆ ವತಿಯಿಂದ ಜಮೀನನ್ನು ಹಸ್ತಾಂತರಿಸಲು ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಗರದ ಮೈತ್ರಿ ಹಾಲ್‍ನಿಂದ ಗಾಲ್ಫ್ ಮೈದಾನದ ಬಳಿ ಉದ್ದೇಶಿತ ಮಲಿನ ನೀರು ಶುದ್ಧೀಕರಣ ಘಟಕದವರೆಗೆ ಮುಖ್ಯ ಕಾಲುವೆಯ ಪಕ್ಕದಲ್ಲಿ ಒಳಚರಂಡಿ ಕೊಳವೆ ಸಾಲುಗಳನ್ನು ಅಳವಡಿಸಲು ನಗರಸಭೆ ವತಿಯಿಂದ ಜಾಗ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಸಂಪರ್ಕ ರಸ್ತೆಯ ಜಾಗವು ಅತಿಕ್ರಮಣಗೊಂಡಿದ್ದು, ತೆರವುಗೊಳಿಸುವ ಕೆಲಸವು ಪ್ರಗತಿಯಲ್ಲಿರುತ್ತದೆ. ಕಾಮಗಾರಿಗೆ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾಗಿರುವ ಅನುದಾನ ರೂ. 2842.79 ಲಕ್ಷಗಳು ಸದರಿ ಯೋಜನೆಗೆ ನವೆಂಬರ್ 2020ರ ಅಂತ್ಯಕ್ಕೆ ರೂ. 2734.84 ಲಕ್ಷಗಳು ವೆಚ್ಚವಾಗಿರುತ್ತದೆ.

ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 15 ಕಿ.ಮೀ ಉದ್ದಕ್ಕೆ ಕಾಂಕ್ರೀಟ್ ಮತ್ತು ಡಾಂಬರು ರಸ್ತೆಗಳನ್ನು ಕತ್ತರಿಸಿ ಕೊಳವೆ ಸಾಲುಗಳನ್ನು ಅಳವಡಿಸಲು ಸಾರ್ವಜನಿಕರಿಂದ ಅಡಚಣೆ ನಿವಾರಣೆ, ವೆಟ್‍ವೆಲ್ ನಿರ್ಮಾಣಕ್ಕೆ ಅವಶ್ಯವಿರುವ ಜಮೀನು, ಮೈತ್ರಿ ಹಾಲ್‍ನಿಂದ ಗಾಲ್ಫ್ ಮೈದಾನದ ಬಳಿ ಉದ್ದೇಶಿತ ಮಲಿನ ನೀರು ಶುದ್ಧೀಕರಣ ಘಟಕದವರೆಗೆ ಮುಖ್ಯ ಕಾಲುವೆಯ ಪಕ್ಕದಲ್ಲಿ ಒಳಚರಂಡಿ ಕೊಳವೆ ಸಾಲುಗಳನ್ನು ಅಳವಡಿಸಲು ಜಾಗದ ಹಸ್ತಾಂತರ ಹಾಗೂ ಮಲಿನ ನೀರು ಶುದ್ಧೀಕರಣ ಘಟಕವನ್ನು ನಿರ್ಮಿಸಲು ಅವಶ್ಯವಿರುವ ಸಂಪರ್ಕ ರಸ್ತೆಯ ಜಾಗದ ಅತಿಕ್ರಮಣ ತೆರವುಗೊಳಿಸಿ ನಗರಸಭೆಯಿಂದ ಮಂಡಳಿಗೆ ಹಸ್ತಾಂತರಿಸಿದ ನಂತರ ಸದರಿ ಕಾಮಗಾರಿಗಳನ್ನು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಿ ಯೋಜನೆಯನ್ನು ಚಾಲನೆಗೊಳಿಸಲಾಗುವುದು ಎಂದು ಸಚಿವರು ಉತ್ತರ ನೀಡಿದ್ದಾರೆ.