ಮಡಿಕೇರಿ, ಡಿ. 10: ಪಶ್ಚಿಮಘಟ್ಟ ಶ್ರೇಣಿಗಳ ಜನರಿಗೆ ಮಾರಕವಾಗಿ ಪರಿಣಮಿಸಲಿರುವ ಡಾ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕದಲ್ಲಿ ಅನುಷ್ಟಾನಗೊಳಿಸಲು ಯಾವುದೇ ತರಾತುರಿ ತೋರದೆ ವರದಿಯಿಂದಾಗುವ ಸಾಧಕ ಬಾಧಕಗಳನ್ನು ಮತ್ತಷ್ಟು ಸಮಗ್ರವಾಗಿ ಪರಿಶೀಲಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಶಾಸಕರಿಗೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನ ದೊರಕಿದೆ.

ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಬೆಂಗಳೂರಿನ ವಿಧಾನಸೌಧದಲ್ಲಿ ಒಕ್ಕೂಟದ ಅಧ್ಯಕ್ಷ ಡಾ|| ಹೆಚ್.ಟಿ. ಮೋಹನ್ ಕುಮಾರ್ ನೇತೃತ್ವದಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ ಹಾಗೂ ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್ ಸಹಯೋಗದೊಂದಿಗೆ ಮುಖ್ಯಮಂತ್ರಿ ಬಿ,.ಎಸ್. ಯಡಿಯೂರಪ್ಪ, ವಿಧಾನಸಭಾ ಸಭಾಪತಿಗಳಾದ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಸಚಿವರುಗಳಾದ ಆರ್. ಅಶೋಕ್ ಮತ್ತು ಗೋಪಾಲಯ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಶಾಸಕರುಗಳಾದ ಸಿ.ಟಿ. ರವಿ, ಎಂ.ಪಿ. ಅಪ್ಪಚ್ಚು ರಂಜನ್, ಹೆಚ್.ಕೆ. ಕುಮಾರಸ್ವಾಮಿ, ಟಿ.ಡಿ. ರಾಜೇಗೌಡ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಅವರನ್ನು ಭೇಟಿ ಮಾಡಿತು.

ಡಾ|| ಕಸ್ತೂರಿ ರಂಗನ್ ವರದಿಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸದೆ ಈ ವರದಿಯ ಸಾಧಕ-ಭಾದಕಗಳನ್ನು ತಿಳಿದುಕೊಂಡು ಜನಪ್ರತಿನಿಧಿಗಳು, ಕಾಫಿ ಬೆಳೆಗಾರರು, ಬೆಳೆಗಾರ ಸಂಘಟನೆಯ ಮುಖಂಡರು ಹಾಗೂ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನೊಳಗೊಂಡ ಸಭೆಗಳನ್ನು ನಡೆಸಿ ಪ್ರತಿಯೊಂದು ಗ್ರಾಮ ವ್ಯಾಪ್ತಿಯಲ್ಲಿ ಉಲ್ಲೇಖವಾಗಿರುವ ಪ್ರದೇಶಗಳನ್ನು ಖುದ್ದಾಗಿ ಪರಿಶೀಲಿಸಿ ಪರಿಷ್ಕøತ ಪಟ್ಟಿಯನ್ನು ಸಲ್ಲಿಸಬೇಕು.

ಡಾ|| ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸ್ಥಳೀಯ ಕೇರಳ ರಾಜ್ಯ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಿಸಬೇಕು ಹಾಗೂ ರೈತರ ಕೃಷಿ ಜಮೀನುಗಳನ್ನು ಹಾಗೂ ವಾಸಸ್ಥಳಗಳನ್ನು ಸೂಕ್ಷ್ಮ ಪರಿಸರ ಪ್ರದೇಶಗಳ ಪಟ್ಟಿಯಿಂದ ಹೊರಗಿಡಬೇಕೆಂದು ಈ ಸಂದರ್ಭ ಬೇಡಿಕೆ ಮುಂದಿಡಲಾಯಿತು.

ಕಸ್ತೂರಿರಂಗನ್ ವರದಿಯ ಬಗ್ಗೆ ಶಾಸಕ ಅರಗ ಜ್ಞಾನೇಂದ್ರ ಸದನದಲ್ಲಿ ಧ್ವನಿ ಎತ್ತಿದ್ದು, ರಾಜ್ಯದ ಗಮನ ಸೆಳೆದಿರುವುದು ಕರ್ನಾಟಕ ಬೆಳೆಗಾರರ ಒಕ್ಕೂಟದ ಹೋರಾಟಕ್ಕೆ ಸಕಾರಾತ್ಮಕ ಸ್ಪಂದನ ದೊರೆತಂತಾಗಿದೆ.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಕಾರ್ಕಳದ ಶಾಸಕ ಸುನಿಲ್ ಕುಮಾರ್, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಕೂಡ, ಕಸ್ತೂರಿ ರಂಗನ್ ವರದಿಯ ಮಾರ್ಪಾಡಿಗಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಕರ್ನಾಟಕ ಬೆಳೆಗಾರರ ಒಕ್ಕೂಟದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕಸ್ತೂರಿ ರಂಗನ್ ವರದಿ ಸಾಧಕ-ಭಾದಕಗಳನ್ನು ಪರಿಶೀಲಿಸಿ ವರದಿಯಲ್ಲಿ ಜನ ಸಾಮಾನ್ಯರಿಗೆ ಹಾಗೂ ಕೃಷಿಕರಿಗೆ ಯಾವುದೇ ತೊಂದರೆಯಾಗದಂತೆ ಮಾರ್ಪಾಡುಗೊಳಿಸಿ ಕೇರಳ ಸರ್ಕಾರ ಹೊರತಂದ ವರದಿಯ ಪರಿಷ್ಕೃತ ಪ್ರತಿಯನ್ನು ಮುಖ್ಯಮಂತ್ರಿಯವರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ.

ಈ ನಿಯೋಗದಲ್ಲಿ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಖಜಾಂಚಿ ಎಂ.ಬಿ. ರಾಜೀವ್, ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್, ಸಹ್ಯಾದ್ರಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಕೆ. ಸುಂದರೇಶ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿರ್ದೇಶಕ ಎಂ.ವಿ. ರತ್ನಾಕರ್ ಹಾಜರಿದ್ದರು.