ಗೋಣಿಕೊಪ್ಪಲು, ಡಿ. 10: ಬಡ ಜನತೆಯ, ಕೂಲಿ ಕಾರ್ಮಿಕರ ಅದರಲ್ಲೂ ವಿಶೇಷವಾಗಿ ಶೋಷಿತರಿಗೆ ಅನ್ಯಾಯಗಳು ನಡೆಯಬಾರದು, ಸಮಾಜದಲ್ಲಿ ಇವರ ಮೇಲೆ ದೌರ್ಜನ್ಯಗಳು ಮರುಕಳುಹಿಸಬಾರದು. ಸಮಾಜದ ಮುಖ್ಯ ವಾಹಿನಿಯಲ್ಲಿ ಇಂತಹವರು ಗುರುತಿಸಿಕೊಳ್ಳುವಂತರಾಗಬೇಕು. ಎಂಬ ಉದ್ದೇಶದಿಂದ ಸಂವಿಧಾನಾತ್ಮಕವಾಗಿ, ಕಾನೂನಾತ್ಮಕವಾಗಿ ರಕ್ಷಣೆ ನೀಡಲು ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದರಿಂದ ಅನ್ಯಾಯಗೊಳಗಾದ ಶೋಷಿತರಿಗೆ ರಕ್ಷಣೆ ಸಿಗುವಂತಾಗಿದೆ. ಆದರೆ ಸಮಾಜದ ಕೆಲವು ಮೇಲ್ವರ್ಗದ ಕುಟುಂಬಗಳು ಈ ಕಾಯ್ದೆಯನ್ನು ತಮ್ಮ ಸ್ವಾರ್ಥಕ್ಕೋಸ್ಕರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಈ ಕಾಯ್ದೆಗೆ ಇರುವ ಗೌರವವನ್ನು ಇಲ್ಲದಂತೆ ಮಾಡಲು ಹೊರಟಿವೆ. ಒಂದೇ ಕೋಮಿನ ಎರಡು ಕುಟುಂಬಗಳು ಕಳೆದ ಮೂರು ತಿಂಗಳಿನಲ್ಲಿ ತಮ್ಮ ಕಾರ್ಮಿಕರ ಮೂಲಕ ಎರಡು ಮಾಲೀಕರ ಮೇಲೆ ಆರು ಆಧಾರ ರಹಿತ ಸುಳ್ಳು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮೂಲಕ ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.

ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದಲ್ಲಿ ಪ್ರಬಲ ಕೋಮಿನ ಎರಡು ಕುಟುಂಬಗಳ ನಡುವೆ ಆಸ್ತಿ ವ್ಯಾಜ್ಯವು ನ್ಯಾಯಾಲಯದ ಮೆಟ್ಟಿಲೇರಿದ್ದು ಕೆಲವು ವರ್ಷಗಳಿಂದ ಈ ವ್ಯಾಜ್ಯವು ಇಬ್ಬರ ನಡುವೆ ನಡೆಯುತ್ತಿದೆ. ಆಸ್ತಿ ವಿಚಾರದಲ್ಲಿ ಆಗಿಂದ್ದಾಗಿಯೇ ಘರ್ಷಣೆಗಳು ಮಾಮೂಲಿಯಾಗಿ ನಡೆಯುತ್ತಿದ್ದವು. ಇದರಿಂದ ತಕ್ಕ ಶಾಸ್ತಿ ಮಾಡಲು ಎರಡು ಕುಟುಂಬದ ಕಾಫಿ ತೋಟದ ಮಾಲೀಕರು ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಲು ತಮ್ಮ ತೋಟದಲ್ಲಿರುವ ಮುಗ್ಧ ಆದಿವಾಸಿ ಕಾರ್ಮಿಕರನ್ನು ಬಳಕೆ ಮಾಡಿಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕಾನೂನಿನ ಅರಿವೆ ಇಲ್ಲದ ಮುಗ್ದ ಜನರನ್ನು ಮಾಲೀಕರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಲಿಖಿತ ಅರ್ಜಿಗಳನ್ನು ನೀಡಿ ಪೊಲೀಸರಿಗೆ ಒತ್ತಾಯ ಹೇರುವ ಮೂಲಕ ಪ್ರಕರಣ ದಾಖಲಿಸಿ ತಪ್ಪೇ ಮಾಡಿಲ್ಲದವರನ್ನು ಜೈಲಿಗೆ ಕಳುಹಿಸುವ ಹುನ್ನಾರಗಳು ನಡೆಯುತ್ತಿವೆ.

ಮುಗ್ಧ ಕಾರ್ಮಿಕರು ತೋಟದ ಮಾಲೀಕನ ಸಣ್ಣಪುಟ್ಟ ಆಮಿಷಗಳಿಗೆ ಒಳಗಾಗಿ ಮಾಲೀಕರು ಬರೆದು ಕೊಡುವ ದೂರಿನ ಅರ್ಜಿಗಳಿಗೆ ಹೆಬ್ಬೆಟ್ಟು ಒತ್ತಿ ಠಾಣೆಗೆ ತೆರಳಿ ಮತ್ತೊಂದು ಕುಟುಂಬದ ಮಾಲೀಕರ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸುತ್ತಿದ್ದಾರೆ. ದೂರಿನ ಅರ್ಜಿ ಸ್ವೀಕರಿಸುತ್ತಿರುವ ಪೊಲೀಸರು ಎಫ್‍ಐಆರ್ ದಾಖಲಿಸಿ ಪ್ರತಿ ನೀಡಿ ಕಳುಹಿಸುತ್ತಿದ್ದಾರೆ. ಇತ್ತ ಕಾರ್ಮಿಕರು ದೂರು ದಾಖಲಿಸಿ ತೆರಳುತ್ತಿದ್ದಂತೆಯೆ ಮತ್ತೊಂದು ತೋಟದ ಮಾಲೀಕರು ತಮ್ಮಲ್ಲಿರುವ ಕೂಲಿ ಕಾರ್ಮಿಕರ ಮೂಲಕ ದೂರಿನ ಅರ್ಜಿ ನೀಡಿ ಮಾಲೀಕನ ಮೇಲೆ ದೂರು ನೀಡುವಂತೆ ಠಾಣೆಗೆ ಕಳುಹಿಸುತ್ತಿದ್ದಾರೆ.

ಎರಡು ಕುಟುಂಬಗಳ ನಡುವೆ ಕಾರ್ಮಿಕರ ಸಹಾಯದಿಂದ ಈಗಾಗಲೇ ಮೂರು ತಿಂಗಳಿನಲ್ಲಿ ಆರು ದೌರ್ಜನ್ಯ ಪ್ರಕರಣಗಳು ಈ ಎರಡು ಕುಟುಂಬಗಳಿಂದ ನಡೆದಿದೆ. ಪ್ರತಿ ನಿತ್ಯ ಪೊಲೀಸರಿಗೆ ಇದು ತಲೆ ನೋವಾಗಿ ಕಾನೂನಾತ್ಮಕವಾಗಿ ನೀಡಿರುವ ದೌರ್ಜನ್ಯ ಕಾಯ್ದೆಗಳು ವಿವಿಧ ರೂಪದಲ್ಲಿ ದುರುಪಯೋಗವಾಗುತ್ತಿದೆ. ನಿಟ್ಟೂರು ಪ್ರಕರಣವೇ ಇದೀಗ ನಮ್ಮ ಮುಂದಿರುವ ಸ್ಪಷ್ಟ ಉದಾಹರಣೆ. ಕಾನೂನನ್ನೇ ತಿಳಿದುಕೊಳ್ಳದ ಮುಗ್ಧರನ್ನು ಬಳಸಿಕೊಂಡು ತಮಗೆ ಬೇಕಾದಂತೆ ಈ ಕಾಯ್ದೆಯನ್ನು ಬಳಸಿಕೊಂಡು ಕಾರ್ಮಿಕರನ್ನು ಆಮಿಷಗಳಿಗೆ ಒಳಪಡಿಸುತ್ತಿರುವುದು ಸರಿಯಲ್ಲ. ಇದರಿಂದ ನೈಜವಾಗಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗದೆ ಅನ್ಯಾಯವಾಗಲಿದೆ. ಪ್ರಬಲ ದೌರ್ಜನ್ಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವ ಎರಡು ಪ್ರಬಲ ಕೋಮಿನ ಕುಟುಂಬಗಳ ಮೇಲೆ ಕ್ರಮಕೈಗೊಳ್ಳಬೇಕು. ಅಲ್ಲದೆ ಈ ರೀತಿ ಕಾರ್ಮಿಕರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಅಲೆದಾಡಿಸುವುದಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಮುಗ್ಧ ಜನರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಲಾಗುವುದು.

-ಹೆಚ್.ಆರ್.ಪರಶುರಾಮ್, ಜಿಲ್ಲಾ ಸಂಚಾಲಕ,ದಲಿತ ಸಂಘರ್ಷ ಸಮಿತಿ,ಗೋಣಿಕೊಪ್ಪಪರಿಣಮಿಸಿದೆ. ಗ್ರಾಮದಲ್ಲಿ ಎರಡು ಕುಟುಂಬಗಳ ಆಸ್ತಿ ವ್ಯಾಜ್ಯದಿಂದಾಗಿ ಶಾಂತಿ ಭಂಗವಾಗಿದಂತಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ತನಿಖೆಗೆ ಆಗಮಿಸಿ ವಿಚಾರ ಮಾಡಿದ ಸಂದರ್ಭ ಮುಗ್ದ ಕೂಲಿ ಕಾರ್ಮಿಕರು ಈ ಬಗ್ಗೆ ತಮಗೇನು ಅರಿವಿಲ್ಲ. ಮಾಲೀಕರು ಹೇಳಿದ ರೀತಿಯಲ್ಲಿ ಸಹಿ ಮಾಡಿದ್ದೇವೆ ಎಂದು ಅಧಿಕಾರಿ ಹಾಗೂ ನ್ಯಾಯಾಧೀಶರ ಮುಂದೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇದರಿಂದಾಗಿ ಪ್ರಕರಣಗಳು ಬಿರಿಪೋರ್ಟ್‍ಗಳಾಗುತ್ತಿವೆ. ಇದರಿಂದ ನ್ಯಾಯಯುತವಾಗಿ ಇರುವವರಿಗೆ ಅನ್ಯಾಯವಾಗುತ್ತಿದೆ.

-ಹೆಚ್.ಕೆ. ಜಗದೀಶ್