ಮಡಿಕೇರಿ, ಡಿ. 10: ಹುಟ್ಟಿನಿಂದ ಸಾವಿನವರೆಗೂ ಮಾನವನಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಮಾನವ ಹಕ್ಕುಗಳು ಅವಶ್ಯವಾಗಿದೆ.

ಮಾನವರಾಗಿ ಹುಟ್ಟಿದ ಎಲ್ಲರೂ ಸಮಾನರು. ಜಾತಿ, ವರ್ಣ, ಧರ್ಮ ಅಥವಾ ಲಿಂಗವು ಯಾವುದೇ ವ್ಯಕ್ತಿಯ ಶ್ರೇಷ್ಠತೆಯನ್ನು ನಿರ್ಧರಿಸುವುದಿಲ್ಲ. ಈ ಹಕ್ಕುಗಳನ್ನು ಯಾರೂ ಕಸಿಯುವುದಕ್ಕೂ ಸಾಧ್ಯವಿಲ್ಲ. ಹಾಗೇನಾದರೂ ಈ ಹಕ್ಕುಗಳಿಗೆ ಧಕ್ಕೆಯಾದಲ್ಲಿ ಅದನ್ನು ಪ್ರಶ್ನಿಸುವ ಮತ್ತು ಅಂತಹ ಹಕ್ಕುಗಳನ್ನು ಪಡೆಯುವ ಅಧಿಕಾರ ಪ್ರತಿಯೊಬ್ಬ ಮಾನವನಿಗೂ ಇದೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಅರಿವು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕವಿದೆ” ಎಂದು ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಪೊ. ಕೆ.ಹೆಚ್. ಧನಲಕ್ಷ್ಮಿ ಅವರು ತಿಳಿಸಿದರು.

ಸೋಮವಾರಪೇಟೆ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಅರಿವು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಮಹತ್ವದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎನ್. ರಾಜು ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಚಾಲಕರಾದ ಪ್ರೊ. ಎಂ.ಎಸ್. ಶಿವಮೂರ್ತಿ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಬಿ.ಎಸ್. ರಮ್ಯ ಉಪಸ್ಥಿತರಿದ್ದರು.