ಮಡಿಕೇರಿ, ಡಿ. 10: ಕರ್ನಾಟಕ ರಾಜ್ಯ ಸರ್ಕಾರವು ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಆದೇಶ ಹೊರಡಿಸಿದ ದಿನವಾದ ತಾ. 15 ರಂದು ‘ಅರೆಭಾಷೆ ದಿನಾಚರಣೆ’ ನಡೆಸಲು ನಿರ್ಧರಿಸ ಲಾಗಿದ್ದು, ಅಂದು ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ತಾ. 15 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ಅರೆಭಾಷೆ ಯಕ್ಷಗಾನ ತಾಳಮದ್ದಲೆ ‘ಪಂಚವಟಿ’ ಪ್ರಸಂಗ ಮತ್ತು ಸಭಾ ಕಾರ್ಯಕ್ರಮವನ್ನು ಆಯೋಜಿಸ ಲಾಗಿದ್ದು, ವಿಶ್ರಾಂತ ಪ್ರಾಂಶುಪಾಲ ಬಾರಿಯಂಡ ಜೋಯಪ್ಪ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆಂದು ತಿಳಿಸಿದರು.

ಅಂದು ಸಂಜೆ 6 ಗಂಟೆಗೆ ಸುಳ್ಯದ ರೋಟರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ‘ಕಂಸವಧೆ’ ಯಕ್ಷಗಾನ ಪ್ರಸಂಗ ಮತ್ತು ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮವನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಉದ್ಘಾಟಿಸ ಲಿದ್ದಾರೆ. ಅಲ್ಲದೇ ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಮನವಿ ಮಾಡಿದರು.

ಉಪನ್ಯಾಸ ಮಾಲಿಕೆ - ತಾ. 11 ರಿಂದ 14 ರವರೆಗೆ ಸಂಜೆ 7 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಉಪನ್ಯಾಸ ಕಾರ್ಯಕ್ರವನ್ನು ಹಮ್ಮಿಕೊಳ್ಳ ಲಾಗಿದ್ದು, ತಾ. 11 ರಂದು ಮದ್ರಾಸ್ ವಿಶ್ವವಿದ್ಯಾನಿಲಯದ ಭಾಷಾ ವಿಜ್ಞಾನಿ ಮತ್ತು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೋಡಿ ಕುಶಾಲಪ್ಪ ಗೌಡ ಅವರು ‘ಅರೆಭಾಷೆ ಧ್ವನಿಮಾ ವ್ಯವಸ್ಥೆ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ತಾ. 12 ರಂದು ದೆಹಲಿಯ ಜೆಎನ್‍ಯು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಅರೆಬಾಸೆನ ಉಳ್ಸುವ ಸಾಧ್ಯತೆಗ’ ವಿಷಯದ ಕುರಿತು, ತಾ. 13 ರಂದು ಮಡಿಕೇರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ‘ಅರೆಬಾಸೆನ ಸಂಶೋಧÀನಾ ಸಾಧ್ಯತೆಗ’ ಹಾಗೂ ತಾ. 14 ರಂದು ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ. ಲಾವಣ್ಯ ಕೊಟ್ಟಕೇರಿಯನ ‘ಅರೆಬಾಸೆನ ಬಳ್ಸುವ ಸಾಧ್ಯತೆ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ತಿತಿತಿ.ಜಿಚಿಛಿebooಞ.ಛಿom/ಂಡಿebhಚಿsheಂಛಿಚಿಜemಥಿ ಮೂಲಕ ಉಪನ್ಯಾಸಗಳನ್ನು ಕೇಳಬಹುದೆಂದು ಮಾಹಿತಿಯಿತ್ತರು.

ವಿವಿಧ ಸ್ಪರ್ಧೆಗಳು: ಅರೆಭಾಷೆ ದಿನಾಚರಣೆ ಪ್ರಯುಕ್ತ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆ, ಅರೆಭಾಷೆ ಪ್ರದೇಶದ ಪಾರಂಪರಿಕ ವಸ್ತುಗಳ ಬಗ್ಗೆ ಲೇಖನ ಸ್ಪರ್ಧೆ, ಅರೆಭಾಷೆ ಪ್ರದೇಶದ ಆಚರಣೆಗಳ ಬಗ್ಗೆ ಲೇಖನ ಸ್ಪರ್ಧೆ, ಅರೆಭಾಷೆ ಪ್ರದೇಶದ ಪಾರಂಪರಿಕ ಕೌಶಲ್ಯಗಳ ಬಗ್ಗೆ ಲೇಖನ ಸ್ಪರ್ಧೆ, ಅರೆಭಾಷೆ ಕಿರುಚಿತ್ರ ಸ್ಪರ್ಧೆ, ಅರೆಭಾಷೆ ಹಾಡುಗಳ ರಾಗ ಸಂಯೋಜನೆ ಸ್ಪರ್ಧೆ, ಅರೆಭಾಷೆ ಪ್ರದೇಶದ ಸಂಸ್ಕೃತಿ, ಪರಿಸರ, ಆಚರಣೆ ಬಿಂಬಿಸುವ ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವೈವಿಧ್ಯಮಯ ಕಾರ್ಯಕ್ರಮ: ಅಕಾಡೆಮಿ ವತಿಯಿಂದ ಕೋವಿಡ್ ನಂತರ ದಿನಗಳಲ್ಲಿ ವಿವಿಧ ಕಾರ್ಯಕ್ರಮ ಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಅಕಾಡೆಮಿ ವತಿಯಿಂದ ‘ಸಾಹೇಬ್ರು ಬಂದವೇ’ ನಾಟಕವನ್ನು ‘ಅರೆಭಾಷೆ ರಂಗಪಯಣ’ದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಬೈಂದೂರು, ಮಣಿಪಾಲ, ಮಂಗಳೂರು, ಕುಂದಾಪುರ, ಮಡಿಕೇರಿ, ಮೈಸೂರು, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಪ್ರದರ್ಶಿಸಲಾಗುವುದು ಎಂದರು.

ಅರೆಭಾಷೆ ಅರ್ಥಕೋಶಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸುಳ್ಯ, ಮಡಿಕೇರಿಯಲ್ಲಿ ತಜ್ಞರ ಸಭೆ ಕರೆದು ಮಾಹಿತಿ ಪಡೆದುಕೊಂಡು ಮಡಿಕೇರಿ ಯಲ್ಲಿ ಸಂಶೋಧನಾ ಸಹಾಯಕರಿಗೆ ಎರಡು ದಿವಸಗಳ ತರಬೇತಿಯನ್ನು ನೀಡಲಾಗಿದ್ದು, 14 ಮಂದಿ ಸಂಶೋಧನಾ ಸಹಾಯಕರು ಪದ ಸಂಗ್ರಹಕ್ಕಾಗಿ ಕ್ಷೇತ್ರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅರೆಭಾಷೆ ವಿಶ್ವಕೋಶಕ್ಕೆ ಸಂಬಂಧಪಟ್ಟಂತೆ ತಾ. 20 ರಂದು ಸುಳ್ಯದಲ್ಲಿ ಬರಹಗಾರರ ಸಭೆ ಕರೆಯಲಾಗಿದ್ದು, ಮೈಸೂರಿನಿಂದ ಹಾ.ತಿ. ಕೃಷ್ಣಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮಡಿಕೇರಿಯಲ್ಲೂ ಈ ಸಂಬಂಧ ಸಭೆ ನಡೆಸಲಾಗುತ್ತದೆಂದು ಎಂದರು.

ಅರೆಭಾಷೆಯಲ್ಲಿ ಯಕ್ಷಗಾನ ಮತ್ತು ತಾಳಮದ್ದಲೆ: ಅರೆಭಾಷೆಯಲ್ಲಿ ಎರಡು ಯಕ್ಷಗಾನ ಮತ್ತು ತಾಳಮದ್ದಲೆ ಕೂಟಕ್ಕಾಗಿ ಮೂರು ಪ್ರಸಂಗಗಳನ್ನು ಭವ್ಯಶ್ರೀ ಕಲ್ಕುಂದ ಕನ್ನಡದಿಂದ ಅರೆಭಾಷೆಗೆ ಅನುವಾದಿಸಿದ್ದು, ಅನುವಾದದ ಸಂದರ್ಭದಲ್ಲಿ ಸುಬ್ರಾಯ ಸಂಪಾಜೆ ಮಾರ್ಗದರ್ಶನ ನೀಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣ ದಲ್ಲಿ ಒಂದು ಪ್ರಸಂಗವನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅರೆಭಾಷೆ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಲೆ ಕೂಟ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರೆಭಾಷೆಯಲ್ಲಿ ಗಮಕವಾಚನ: ಕನ್ನಡದಲ್ಲಿ ಮರೆಯಾಗುತ್ತಿರುವ ಗಮಕವಾಚನ ಕಲೆಯನ್ನು ಅರೆಭಾಷೆಯಲ್ಲಿ ಪರಿಚಯಿಸುವುದ ಕ್ಕೋಸ್ಕರ ಅರೆಭಾಷೆಯಲ್ಲಿ ಗಮಕ ವಾಚನವನ್ನು ಈಗಾಗಲೇ ಧ್ವನಿ ಮುದ್ರಿಸಲಾಗಿದ್ದು, ಭವ್ಯಶ್ರೀಯವರು ಅರೆಭಾಷೆಗೆ ಅನುವಾದಿಸಿದ್ದಾರೆ. ಕಲಾವಿದರಾಗಿ ಸುಬ್ರಾಯ ಸಂಪಾಜೆ, ಜಬ್ಬಾರ್ ಸಮೋ, ಭವ್ಯಶ್ರೀ ಕುಲ್ಕುಂದ ಸಹಕರಿಸಿದ್ದಾರೆಂದು ಮಾಹಿತಿ ಯನ್ನಿತ್ತರು.

ಅರೆಭಾಷೆ ಹಾಡುಗಳಿಗೆ ರಾಗ ಸಂಯೋಜನೆ: ಅರೆಭಾಷೆ ಹಾಡುಗಳಿಗೆ ರಾಗ ಸಂಯೋಜನೆ ಮಾಡುವ ಮೂಲಕ ಅರೆಭಾಷೆ ಕವಿಗಳಿಗೆ ಧ್ವನಿಯಾಗುವ ಉದ್ದೇಶದಿಂದ ಪ್ರಾಥಮಿಕವಾಗಿ ಕನಿಷ್ಟ 10 ಅರೆಭಾಷೆ ಹಾಡುಗಳಿಗೆ ರಾಗ ಸಂಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಳ್ಯದ ಸುಗಮ ಸಂಗೀತ ಗಾಯಕ ಕೆ.ಆರ್. ಗೋಪಾಲಕೃಷ್ಣ ಅವರು ರಾಗ ಸಂಯೋಜನೆ ಮಾಡಿದ್ದಾರೆ ಎಂದರು.

ಪಾರಂಪರಿಕ ವಸ್ತುಗಳ ಛಾಯಾಚಿತ್ರ ದಾಖಲೀಕರಣ -ಇಂದಿನ ಆಧುನಿಕ ಯುಗದಲ್ಲಿ ಪಾರಂಪರಿಕ ವಸ್ತುಗಳು ಮರೆಯಾಗುತ್ತಿದ್ದು, ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅರೆಭಾಷೆ ಪಾರಂಪರಿಕ ವಸ್ತುಗಳ ಛಾಯಾಚಿತ್ರ ದಾಖಲೀಕರಣ ಆರಂಭಗೊಂಡಿದ್ದು, ಈಗಾಗಲೇ ಕಡಬ ತಾಲೂಕಿನ ಕುಂತೂರು ಸುಬ್ರಮಣ್ಯ ಮಾಸ್ಟರ್ ಅವರ ಸಂಗ್ರಹಾಲಯದ ವಸ್ತುಗಳ ಛಾಯಾಚಿತ್ರ ದಾಖಲೀಕರಣ ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ಮಡಿಕೇರಿಯ ತೋಟಂಬೈಲು ಪಾರ್ವತಿ ಅವರ ಸಂಗ್ರಹದಲ್ಲಿರುವ ವಸ್ತುಗಳ ದಾಖಲೀಕರಣ ಮಾಡಲಾಗುವುದು ಎಂದರು.

ಸಾಕ್ಷ್ಯಚಿತ್ರ ನಿರ್ಮಾಣ: ಅರೆಭಾಷೆ ಕ್ಷೇತ್ರದ ಸಾಧಕರಾದ ಎನ್.ಎಸ್. ದೇವಿಪ್ರಸಾದ್, ಪ್ರೊ. ಕೋಡಿ ಕುಶಾಲಪ್ಪ ಗೌಡ, ಕಲಾವಿದ ಮೋಹನ್ ಸೋನ ಹಾಗೂ ನೂರ ಹತ್ತು ವರ್ಷಕ್ಕಿಂತ ಮಿಗಿಲಾದ ಇತಿಹಾಸವುಳ್ಳ ಕೊಡಗು ಗೌಡ ವಿಧ್ಯಾಸಂಘ ಸಂಸ್ಥೆಯ ಬಗ್ಗೆ ಅಕಾಡೆಮಿ ವತಿಯಿಂದ ಸಾಕ್ಷ್ಯಚಿತ್ರ ಮಾಡಲು ನಿರ್ಧರಿಸಿದ್ದು, ಕೆಲಸ ಪ್ರಗತಿ ಯಲ್ಲಿದೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ ಉಪಸ್ಥಿತರಿದ್ದರು.