ಗೋಣಿಕೊಪ್ಪ ವರದಿ, ಡಿ. 9: ಕೊಡಗು ಜಿಲ್ಲಾ ಮತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾ. 13 ರಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸುಗ್ಗಿ ಕವಿಗೋಷ್ಠಿ ಆಯೋಜಿಸಲಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಪುತ್ತರಿ ಸಂದರ್ಭವಾಗಿರುವುದರಿಂದ ಸುಗ್ಗಿ ಹೆಸರಿನಲ್ಲಿ ಕವನ ವಾಚನ ಮಾಡಲು ಅವಕಾಶ ನೀಡಲಾಗುತ್ತಿದೆ. ಯಾವುದೇ ವಿಷಯದಲ್ಲಿ ಕವನ ವಾಚಿಸಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲು ನೋಂದಣಿ ಮಾಡುವ 25 ಕವಿಗಳಿಗೆ ಅವಕಾಶ ನೀಡಲಾಗುವುದು. 16-20 ಸಾಲಿನ ಒಳಗೆ ಕವನವಿರಬೇಕು. ಕವಿಗಳು ದೂ. ಸಂಖ್ಯೆ 9591366296, 9449761488 ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಅಂದು ಬೆಳಗ್ಗೆ 1.30 ಗಂಟೆಗೆ ಕವನ ವಾಚನ ಆರಂಭವಾಗಲಿದೆ ಎಂದರು.

ಕನ್ನಡಕ್ಕೆ ಕಾಣಿಕೆ ನೀಡುತ್ತಿರುವ ಜಿಲ್ಲೆಯ ಐದು ತಾಲೂಕಿನ ಐವರನ್ನು ಸನ್ಮಾನಿಸಲಾಗುವುದು. ಉಳುವಂಗಡ ಕಾವೇರಿ ಉದಯ, ಡಾ. ರೇವತಿ ಪೂವಯ್ಯ, ಅಪರ್ಣ ಹುಲಿತಾಳ, ನ.ಲ. ವಿಜಯ, ತೀರ್ಥಕುಮಾರ್ ಇವರನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮ ಪೊನ್ನಂಪೇಟೆ ತಾಲೂಕು ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರಿಗೆ ಅರ್ಪಣೆ ಮಾಡಲಾಗುತ್ತದೆ. ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ದತ್ತಿಯಾಗಿದ್ದು, ದಿ. ಸುಲೋಚನ ಮತ್ತು ಗಂಗಾಂಧರಶೇಟ್ ಜ್ಞಾಪಕಾರ್ಥ ನಡೆಯಲಿದೆ ಎಂದರು.

ಸುಗ್ಗಿಕವಿಗೋಷ್ಠಿ ಅಧ್ಯಕ್ಷೆಯಾಗಿ ಉಳುವಂಗಡ ಕಾವೇರಿ ಉದಯ ಭಾಗವಹಿಸಲಿದ್ದಾರೆ. ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪಾನಂದಾ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಡಾ. ಎಂ.ಬಿ. ಕಾವೇರಪ್ಪ, ಅತಿಥಿಗಳಾಗಿ ದತ್ತಿ ದಾನಿ ಎಂ.ಜೆ. ಮೋಹನ್, ಶ್ರೀಮಂಗಲ ಹೋಬಳಿ ಕಸಾಪ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಾ. ಚಂದ್ರಶೇಖರ್, ಕಾರ್ಯದರ್ಶಿ ಸುಮಿ ಸುಬ್ಬಯ್ಯ, ಸುಗ್ಗಿ ಕವಿಗೋಷ್ಠಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಉಪಸ್ಥಿತರಿದ್ದರು.