ಶನಿವಾರಸಂತೆ, ಡಿ. 9: ಶನಿವಾರಸಂತೆಯನ್ನು ಪಟ್ಟಣ ಪಂಚಾಯಿತಿಯಾಗಿಸುವ ಸರ್ವೆ ಕಾರ್ಯ ನೆನೆಗುದಿಗೆ ಬಿದ್ದಿದೆ ಎಂದು ಕೂಜಗೇರಿ ಗ್ರಾಮದ ನಿವೃತ್ತ ಸೈನಿಕ ಕೆ.ಟಿ. ಹರೀಶ್ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯ 2,000 ಮನೆಗಳು, 420 ಎಕರೆ ಪ್ರದೇಶವನ್ನು ಸರಕಾರ ಪಟ್ಟಣ ಪಂಚಾಯಿತಿಯೆಂದು ಘೋಷಣೆ ಮಾಡಿ 6-7 ವರ್ಷಗಳಾದರೂ ಜನತೆಗೆ ಪಟ್ಟಣ ಪಂಚಾಯಿತಿಯ ಭಾಗ್ಯ ದೊರೆತಿಲ್ಲ. ಈವರೆಗೆ ಐದಾರು ಮಂದಿ ತಹಶೀಲ್ದಾರರು ಬಂದು ಹೋದರೂ ಸರ್ವೆ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ಸರ್ವೆ ಇಲಾಖೆಯ ಅಧಿಕಾರಿಗಳೂ ಈ ಬಗ್ಗೆ ಸ್ಪಂದಿಸುತ್ತಿಲ್ಲ, ಸರ್ವೆ ಅಧಿಕಾರಿ ಮಾದೇಗೌಡರು ಸ್ವಲ್ಪ ಪ್ರಮಾಣದಲ್ಲಿ ಸರ್ವೆ ನಕಾಶೆ ತಯಾರಿಸಿದ್ದು, ಕೆಲ ಶ್ರೀಮಂತರು ಮಾತ್ರ ತಮ್ಮ ಜಾಗ ಸರ್ವೆ ಮಾಡಿಸಿಕೊಂಡರು.
ನಂತರ ಬಂದವರಾರೂ ಇಲ್ಲಿ ಉಳಿಯದೇ ವರ್ಗಾವಣೆಯಾಗಿ ಹೋದರು. ನಾಗರಿಕರು, ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‍ಗಳಲ್ಲಿ ಸಾಲಸೌಲಭ್ಯವೂ ದೊರೆಯುತ್ತಿಲ್ಲ. ಸರ್ವೆ ಕಾರ್ಯಕ್ಕಾಗಿ ನಾಡಕಚೇರಿ, ತಾಲೂಕು ಕಚೇರಿಗೆ ಅಲೆದಾಡುವುದೇ ಆಗಿದೆ. ರೈತರ ಜಮೀನುಗಳ ಹದ್ದುಬಸ್ತು ಸರ್ವೆ ಕಾರ್ಯವೂ ನಡೆಯುತ್ತಿಲ್ಲ. ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳಾದರೂ ಸ್ಪಂದಿಸಲಿ ಎಂದು ಕೆ.ಟಿ. ಹರೀಶ್ ಆಗ್ರಹಿಸಿದ್ದಾರೆ.