ಕುಶಾಲನಗರ, ಡಿ. 4: ಐತಿಹಾಸಿಕ ಕುಶಾಲನಗರ ಗಣಪತಿ ದೇವಾಲಯದ 100ನೇ ವರ್ಷದ ಜಾತ್ರೆ ಅಂಗವಾಗಿ ರಥೋತ್ಸವ ಸರಳವಾಗಿ ನಡೆಯಿತು. ಕೋವಿಡ್-19 ಮಾರ್ಗಸೂಚಿ ಹಿನ್ನೆಲೆ ಜಿಲ್ಲಾಡಳಿತ ರಥೋತ್ಸವಕ್ಕೆ ಅನುಮತಿ ನೀಡದ ಹಿನ್ನೆಲೆ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮಧ್ಯಪ್ರವೇಶ ದೊಂದಿಗೆ ಅಧಿಕಾರಿಗಳ ಮನವೊಲಿಸಿ ಸಾಂಕೇತಿಕವಾಗಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೊಂದಿಗೆ ಕೇವಲ 50 ರಿಂದ 100 ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ಶ್ರೀ ಗಣಪತಿ ರಥೋತ್ಸವ ಮತ್ತು ಉತ್ಸವಗಳ ಹಿನ್ನೆಲೆ ನ.30 ರಿಂದ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುವುದರೊಂದಿಗೆ ಶುಕ್ರವಾರ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಅವರ ಮುಂದಾಳತ್ವದಲ್ಲಿ ಮುಖ್ಯ ಅರ್ಚಕ ರಾಘವೇಂದ್ರ ಭಟ್ ನೇತೃತ್ವದ ತಂಡ ಮುಂಜಾನೆಯಿಂದ ಪೂಜೆ, ಪುನಸ್ಕಾರ ನಡೆಸಿದರು. ಪ್ರತಿ ವರ್ಷದಂತೆ ರಥೋತ್ಸವ ಮಧ್ಯಾಹ್ನ ನಡೆಯಬೇಕಾಗಿದ್ದು ಈ ಬಾರಿ ಆಡಳಿತ ಮಂಡಳಿ ನಿರ್ಧಾರದಂತೆ ಬೆಳಿಗ್ಗೆ 8 ಗಂಟೆಗೆ ರಥೋತ್ಸವ ನಡೆಯಿತು.
(ಮೊದಲ ಪುಟದಿಂದ) ದೇವಾಲಯದಿಂದ ರಥಬೀದಿ ಮೂಲಕ ತೆರಳಿದ ರಥವನ್ನು ಆಂಜನೇಯ ದೇವಾಲಯ ತನಕ ಎಳೆದ ಭಕ್ತಾದಿಗಳು ನಂತರ ದೇವಾಲಯದ ಆವರಣಕ್ಕೆ ಎಳೆದು ತಂದರು. ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಅವರುಗಳು ಉತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ರಂಜನ್, ಸಾಂಪ್ರದಾಯಿಕ ಪೂಜೆಯೊಂದಿಗೆ ಸರಳವಾಗಿ ರಥೋತ್ಸವ ಜರುಗಿದ್ದು ಮಹಾಮಾರಿ ಕೊರೊನಾ ತೊಲಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
100ನೇ ವರ್ಷದ ಅಂಗವಾಗಿ ಅದ್ಧೂರಿಯಾಗಿ ರಥೋತ್ಸವ ಸಂಭ್ರಮಾಚರಣೆ ನಡೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದಲೇ ತಯಾರಿ ನಡೆಸಲಾಗಿತ್ತು. ಆದರೆ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಸರಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದರೊಂದಿಗೆ ಸಾಂಪ್ರದಾಯಿಕವಾಗಿ ಸರಳ ರಥೋತ್ಸವ ನಡೆದಿದೆ ಎಂದು ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಹೇಳಿದರು.
ರಥೋತ್ಸವ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು. ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಸ್ಥಳದಲ್ಲಿ ಉಪಸ್ಥಿತರಿದ್ದು ಆಡಳಿತ ಮಂಡಳಿ ಪ್ರಮುಖರಿಗೆ ಸಲಹೆಗಳನ್ನು ನೀಡುವುದರೊಂದಿಗೆ ಯಾವುದೇ ರೀತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡದಂತೆ ವಿನಂತಿಸಿದರು. ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಸುಸೂತ್ರವಾಗಿ ರಥೋತ್ಸವ ನಡೆದ ಹಿನ್ನೆಲೆ ತಹಶೀಲ್ದಾರ್ ಅವರು ಆಡಳಿತ ಮಂಡಳಿ ಮತ್ತು ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗಣೇಶ್ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿ ವತಿಯಿಂದ ರಥ ಎಳೆಯಲು ಆಯ್ದ ಮಂದಿಗೆ ವಿಶೇಷ ಪಾಸ್ ಸೌಲಭ್ಯ ಕಲ್ಪಿಸಲಾಗಿತ್ತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಸಮಿತಿ ಉಪಾಧ್ಯಕ್ಷ ಆರ್. ಬಾಬು, ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ಖಜಾಂಚಿ ಎಂ.ಕೆ. ದಿನೇಶ್, ಸಹ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ನಿರ್ದೇಶಕ ವಿ.ಪಿ. ಶಶಿಧರ್, ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ್, ವಿಶೇಷ ಆಹ್ವಾನಿತರಾದ ವಿ.ಡಿ. ಪುಂಡರೀಕಾಕ್ಷ, ಹೆಚ್.ಎನ್. ರಾಮಚಂದ್ರ, ಬಿ. ಅಪ್ಪಣ್ಣ, ಡಿ.ಸಿ. ಜಗದೀಶ್, ಕೆ.ಎಲ್. ಸುರೇಶ್, ಪ.ಪಂ. ಪ್ರತಿನಿಧಿಗಳು ಮತ್ತು ಸ್ಥಳೀಯ ದೇವಾಲಯಗಳ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.
ಕೋವಿಡ್ ನಿಯಮಾವಳಿ ಪ್ರಕಾರ ಭಕ್ತಾದಿಗಳು ಮಾಸ್ಕ್ ಧರಿಸಿ ಫೇಸ್ಶೀಲ್ಡ್ನೊಂದಿಗೆ ರಥ ಎಳೆಯುವಲ್ಲಿ ಭಾಗಿಯಾದ ದೃಶ್ಯ ಕಂಡುಬಂತು.
ಕೋವಿಡ್ ನಿಯಮಾವಳಿ ಪ್ರಕಾರ ಈ ಬಾರಿ ದನಗಳ ಪ್ರದರ್ಶನ, ಅಮ್ಯೂಸ್ಮೆಂಟ್ ಪಾರ್ಕ್ ರದ್ದು ಮಾಡಲಾಗಿದೆ. ಸಾಂಸ್ಕøತಿಕ ವೇದಿಕೆ ಇರುವುದಿಲ್ಲ. ವರ್ಷಂಪ್ರತಿಯಂತೆ ಭಕ್ತಾದಿಗಳಿಗೆ ನಡೆಯುತ್ತಿದ್ದ ಅನ್ನಸಂತರ್ಪಣೆ ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಸಮಿತಿ ಖಜಾಂಚಿ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ಸಾಯಂಕಾಲ ನಡೆಯುವ ಎಲ್ಲಾ ಉತ್ಸವ ಕಾರ್ಯಕ್ರಮ ಎಂದಿನಂತೆ ನಡೆಯಲಿದೆ ಎಂದು ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಮಾಹಿತಿ ನೀಡಿದ್ದಾರೆ.