ಮಡಿಕೇರಿ, ಡಿ. 4: ಮೂರ್ನಾಡು ಬೇತ್ರಿ ಸಮೀಪ ಇಂದು ಬೆಳಿಗ್ಗೆ ಪಿಕಪ್ ವಾಹನ (ಟಾಟಾ ಕ್ಸೆನಾನ್) (ಕೆ.ಎ.45.6138) ಹಾಗೂ ಓಮ್ನಿ (ಕೆ.ಎ.0.5.ಪಿ.9456) ಮುಖಾಮುಖಿಯಾಗಿದ್ದು, ಓಮ್ನಿಯಲ್ಲಿದ್ದ 5 ಮಂದಿಯ ಪೈಕಿ ಈರ್ವರು ಸಾವನ್ನಪ್ಪಿದ್ದಾರೆ. ಇತರ ಮೂರು ಮಂದಿಗೆ ಗಾಯಗಳಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಕಪ್ ವಾಹನದಲ್ಲಿ ಚಾಲಕ ಸಹಿತ 16 ಮಂದಿ ಪ್ರಯಾಣಿಸುತ್ತಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕೂಲಿ ಕಾರ್ಮಿಕರಾದ ಮೂರ್ನಾಡಿನ ನಿವಾಸಿಗಳಾದ ಮಣಿ, ಕುಮಾರ್, ಖಾದರ್, ಸುಬ್ರಮಣಿ ಹಾಗೂ ಹರೀಶ್ ಅವರುಗಳು ಇಂದು ಬೆಳಿಗ್ಗೆ ಮೂರ್ನಾಡಿನಿಂದ ಗೋಣಿಕೊಪ್ಪಕ್ಕೆ ಗಾರೆ ಕೆಲಸ ಸಂಬಂಧ ಓಮ್ನಿಯಲ್ಲಿ ತೆರಳುತ್ತಿದ್ದರು. ಬೆಳಿಗ್ಗೆ ಸುಮಾರು 8:30 ಗಂಟೆಗೆ ಬೇತ್ರಿ ಸಮೀಪದ ರಸ್ತೆಯಲ್ಲಿ ಮೈತಾಡಿಯಿಂದ ಬೇತ್ರಿಗೆ ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯುತ್ತಿದ್ದ ಪಿಕ್ಅಪ್ಗೆ ಓಮ್ನಿ ಮುಖಾಮುಖಿಯಾಗಿದೆ. ಪರಿಣಾಮ ಪಿಕ್ಅಪ್ ವಾಹನ ಪಲ್ಟಿಯಾಗಿದ್ದು ಓಮ್ನಿಯ ಎಡಭಾಗ ಸಂಪೂರ್ಣ ಜಖಂ ಆಗಿದೆ. ಓಮ್ನಿ ಚಾಲಕ ಖಾದರ್ ಹಾಗೂ ಹಿಂಬದಿ ಇದ್ದ ಮೂವರ ಪೈಕಿ ಇಬ್ಬರಾದ ಮಣಿ ಹಾಗೂ ಕುಮಾರ್ ಅವರಿಗೆ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓಮ್ನಿಯ ಎಡಭಾಗದಲ್ಲಿ ಕುಳಿತಿದ್ದ ಮೂರ್ನಾಡುವಿನ ಹರೀಶ್ ಹಾಗೂ ಸುಬ್ರಮಣಿ ಅವರು ಸಾವನ್ನಪ್ಪಿದ್ದಾರೆ. ಗಾಯಾಳುಗಳಾದ ಮಣಿ, ಕುಮಾರ್ ಹಾಗೂ ಚಾಲಕ ಖಾದರ್ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಕ್ಅಪ್ ವಾಹನದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ಮೊದಲ ಪುಟದಿಂದ)
ಪಿಕ್ಅಪ್ ಚಾಲಕ ವಶಕ್ಕೆ
ಮುಸ್ತಫಾ ಎಂಬವರಿಗೆ ಸೇರಿದ ಪಿಕ್ಅಪ್ ವಾಹನವನ್ನು ಇಂದು ಸುಬ್ರಮಣಿ ಎಂಬವರು 15 ಮಂದಿ ಕಾರ್ಮಿಕರನ್ನು ಮೈತಾಡಿಯಿಂದ ಬೇತ್ರಿ ತೋಟಕ್ಕೆ ಕೆಲಸಕ್ಕೆಂದು ಕರೆದೊಯ್ಯುತ್ತಿದ್ದರು. ಚಾಲಕ ಸುಬ್ರಮಣಿ ಅವರಿಗೆ ವಾಹನ ಚಾಲನೆಯ ಪರವಾನಗಿ ಇಲ್ಲದಿದ್ದ ಕಾರಣ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಡಿಕೇರಿ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಓಮ್ನಿ ವಾಹನದ ಪ್ರಯಾಣಿಕರಾದ ಮೃತÀ ಸುಬ್ರಮಣಿ(35) ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹರೀಶ್(40) ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.