ಮಡಿಕೇರಿ, ಡಿ. 4: ಮಡಿಕೇರಿಯ ಪ್ರತಿಷ್ಠಿತ ‘ವ್ಯೂ ಪಾಯಿಂಟ್’ ಆಗಿರುವ ‘ಸ್ಟೋನ್ ಹಿಲ್’ ಗುಡ್ಡವು ಮದ್ಯವ್ಯಸನಿಗಳಿಗೆ ತೆರೆದ ಬಾರ್ ಆಗಿಬಿಟ್ಟಿದೆ. ರಾತ್ರಿ ಆಗುತ್ತಿದ್ದಂತೆ ಗುಡ್ಡಕ್ಕೆ ಬರುವ ಸ್ಥಳೀಯ ಕೆಲ ಯುವಕರು ಗುಡ್ಡದಲ್ಲಿಯೇ ಕುಳಿತು ಮದ್ಯಪಾನ, ಧೂಮಪಾನ ಮಾಡಿ ಗುಡ್ಡದಲ್ಲಿಯೇ ಬಾಟಲಿ, ಸಿಗರೇಟ್ ಪ್ಯಾಕ್‍ಗಳನ್ನು ಎಸೆದು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಸಮೀಪದಲ್ಲಿಯೇ ಇಡೀ ಮಡಿಕೇರಿಯ ಕಸದ ರಾಶಿ ನಗರಸಭೆ ವತಿಯಿಂದ ವಿಲೇವಾರಿಯಾಗಿ ಕಸದ ಗುಡ್ಡ ನಿರ್ಮಾಣವಾಗಿದ್ದು, ಬೀರ್ ಬಾಟಲಿಗಳ ಗುಡ್ಡ ಸೃಷ್ಟಿಯಾಗುವ ದಿನ ದೂರವಿಲ್ಲ. ಸ್ವಚ್ಛಗೊಳಿಸಿದ ಮರುದಿನವೇ ಸೃಷ್ಟಿಯಾದ ತ್ಯಾಜ್ಯಜಿಲ್ಲೆಯ ಯುವತಿಯರಾದ ದಶಮಿ ಪೂಣಚ್ಚ ಹಾಗೂ ಬಲ್ಲಚಂಡ ಟವ್ಲೀನ್ ತಮ್ಮ ಬಾಲ್ಯದ ನೆನಪು ಸವಿಯಲೆಂದು ಸ್ಟೋನ್ ಹಿಲ್‍ಗೆ ತೆರಳಿ ವಾಯುವಿಹಾರ ನಡೆಸುತ್ತಿದ್ದಾಗ ಅವರುಗಳಿಗೆ ಇಲ್ಲಿನ ಕಸದ ರಾಶಿ ನೋಡಿ ಅಚ್ಚರಿಯಾಯಿತು. ನಗರದ ಖ್ಯಾತ ‘ವ್ಯೂ ಪಾಯಿಂಟ್’ನ ಪರಿಸ್ಥಿತಿ ನೋಡಿ ತಡೆಯಲಾರದ ಅವರು 6 ದಿನಗಳ ಕಾಲ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 200 ಬೀರ್ ಬಾಟಲಿಗಳು, ಸಾರಾಯಿ ಪ್ಯಾಕೆಟ್‍ಗಳು, ಪ್ಲಾಸ್ಟಿಕ್, ಚಿಪ್ಸ್ ಪ್ಯಾಕೆಟ್ ಸೇರಿದಂತೆ ಇತರ ತ್ಯಾಜ್ಯಗಳ ರಾಶಿಯನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಶ್ರಮದಾನದ ಫೋಟೋ ಹಾಕಿ ಕಸ ಎಸೆಯದಂತೆ ಸರ್ವರಿಗೂ ಮನವಿ ಮಾಡಿದ್ದಾರೆ. ಪ್ರಸ್ತುತ ಹೊರ ಜಿಲ್ಲೆಗಳಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು ರಜೆಯ ನಿಮಿತ್ತ ಜಿಲ್ಲೆಯಲ್ಲಿಯೇ ಇರುವ ಈ ಯುವತಿಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ಮೊದಲ ಪುಟದಿಂದ) ತಮ್ಮ ಈ ಕಾರ್ಯಕ್ಕೆ ಶ್ಲಾಘನೆ ದೊರೆಯುತ್ತಿದ್ದಂತೆಯೇ ‘ಸ್ಟೋನ್ ಹಿಲ್’ ಮತ್ತೆ ತನ್ನ ಹಳೆಯ ರೂಪ ಪಡೆದುಕೊಂಡಿರುವುದು ವಿಷಾದನೀಯ. ಪ್ಲಾಸ್ಟಿಕ್, ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳು ಸ್ಟೋನ್ ಹಿಲ್‍ನಲ್ಲಿ ಮತ್ತೆ ಎದ್ದಿದ್ದು ಎಷ್ಟೇ ಜಾಗೃತಿ ಮೂಡಿಸಿದರೂ ಬುದ್ಧಿ ಬಾರದ ಜನರ ಬೇಜವಾಬ್ದಾರಿತನಕ್ಕೆ ಯುವತಿಯರು ವಿಷಾದ ವ್ಯಕ್ತಪಡಿಸಿದ್ದಾರೆ.