ಶಾಸಕ ಅಪ್ಪಚ್ಚು ರಂಜನ್

ಕೂಡಿಗೆ, ಡಿ. 4: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಈಗಾಗಲೇ ರೂ. 130 ಕೋಟಿ ಬಿಡುಗಡೆಯಾಗಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಅವರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭ ಮಾತನಾಡುತ್ತಾ, ರಾಜ್ಯ ಸರ್ಕಾರದ ನಿಯಮನುಸಾರವಾಗಿ ಹಾರಂಗಿ ಅಣೆಕಟ್ಟೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಅಣೆಕಟ್ಟೆ ತುಂಬಿ ನದಿಯ ಮೂಲಕ ನೀರನ್ನು ಹರಿಯುವಾಗ ಅನೇಕ ತೊಂದರೆಗಳು ಸಂಭವಿಸಿವೆ. ಇವುಗಳನ್ನು ಕಳೆದ ಮೂರು ವರ್ಷಗಳಿಂದ ಅರಿತು ಈ ಸಾಲಿನಲ್ಲಿ ಹೂಳೆತ್ತುವಿಕೆಗೆ ಹಣವನ್ನು ಕಾಯ್ದಿರಿಸಿ ಮುಂದಿನ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಣೆಕಟ್ಟೆಯ ಹಿಂದೆ ಹೂಳು ಎತ್ತುವಿಕೆಗೆ ರೂ. 38 ಕೋಟಿ, ನಂತರ ಹಟ್ಟಿಹೊಳೆ ಮತ್ತು ಮಾದಾಪುರದವರೆಗೆ ನದಿ ಪಾತ್ರದ ತಡೆಗೊಡೆ ನಿರ್ಮಾಣಕ್ಕೆ ರೂ. 77 ಕೋಟಿ ಸೇರಿದಂತೆ ಉಳಿದ ಹಣದಲ್ಲಿ ನದಿ ದಂಡೆಯ ಸಂರಕ್ಷಣೆಗೆ ಬಳಕೆ ಮಾಡಲಾಗುವುದು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕ್ರಿಯಾ ಯೋಜನೆ ಅನುಗುಣವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.