ಕೂಡಿಗೆ, ಡಿ. 5: ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕ ಅಳುವಾರ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಕಾಡಾನೆಗಳು ಈ ಭಾಗದ ರೈತರ ಜಮೀನಿಗೆ ದಾಳಿ ಮಾಡಿ ಅಪಾರ ಬೆಳೆಯನ್ನು ನಷ್ಟಪಡಿಸಿವೆ. ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದಿರುವ ಹತ್ತಕ್ಕೂ ಹೆಚ್ಚು ಕಾಡಾನೆಗಳು ಈ ಭಾಗದಲ್ಲಿ ಬೆಳೆಸಲಾಗಿದ್ದ ಗೆಣಸು, ಕೇನೆ, ಮರಗೆಣಸು ಬಾಳೆ ಇತ್ಯಾದಿಗಳನ್ನು ತಿಂದು ನಷ್ಟಪಡಿಸುವುದರ ಜೊತೆಗೆ ಸಮೀಪದ ಮನೆಯವರನ್ನೂ ಓಡಿಸಿಕೊಂಡು ಬಂದಿರುವ ಘಟನೆ ಚಿಕ್ಕ ಅಳುವಾರದಲ್ಲಿ ನಡೆದಿದೆ. ಈ ವ್ಯಾಪ್ತಿಯ ಕೃಷಿ ರಾಜ್ಯ ಪ್ರಶಸ್ತಿ ವಿಜೇತ ಪ್ರೇಮಕುಮಾರ್, ಸಣ್ಣಪ್ಪ, ನಂಜುಂಡ, ತಿಮ್ಮಪ್ಪ, ತಮ್ಮಣ್ಣ, ರಾಜಣ್ಣ ಎಂಬವರ ಜಮೀನುಗಳಲ್ಲಿ ಬೆಳೆಸಲಾದ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಈ ಭಾಗದ ರೈತರಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಅಧಿಕಾರಗಳು ಮುಂದಾಗಬೇಕು ಎಂಬದು ರೈತರ ಒತ್ತಾಯವಾಗಿದೆ. ಸ್ಥಳಕ್ಕೆ ಬಾಣವಾರ ಉಪ ಅರಣ್ಯ ವಲಯಾಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಡಾನೆಗಳನ್ನು ಬಾಣವಾರ ಮೀಸಲು ಅರಣ್ಯಕ್ಕೆ ಓಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.