ಸೋಮವಾರಪೇಟೆ, ಡಿ.4: ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿರುವ ಭತ್ತ ಕಾಡಾನೆಗಳ ಕಾಲಡಿಗೆ ಸಿಲುಕಿ ಮಣ್ಣುಪಾಲಾಗುತ್ತಿದ್ದು, ವರ್ಷದ ಶ್ರಮ ನೀರಿನಲ್ಲಿ ಹೋಮದಂತಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಕೂಗೂರು ಮತ್ತು ಚಿಕ್ಕಾರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾಲಂಬಿ, ನಿಡ್ತ ಮೀಸಲು ಅರಣ್ಯಕ್ಕೆ ಒತ್ತಿಕೊಂಡಿರುವ ಕೂಗೂರು-ಚಿಕ್ಕಾರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಹಾವಳಿ ಅಧಿಕವಾಗಿದೆ. ಈ ಭಾಗದ ಗದ್ದೆಗಳಿಗೆ ಲಗ್ಗೆಯಿಡುತ್ತಿರುವ ಕಾಡಾನೆಗಳ ಹಿಂಡು ಫಸಲನ್ನು ನಷ್ಟಪಡಿಸುತ್ತಿದ್ದು, ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ.

ವರ್ಷದ ಬೆಳೆ ಕೈಗೆ ಬರುವಷ್ಟರಲ್ಲಿ ಕಾಡಾನೆಗಳ ಕಾಲಡಿಗೆ ಸಿಲುಕಿ ಮಣ್ಣುಪಾಲಾಗುತ್ತಿದ್ದು, ಶಾಶ್ವತ ಪರಿಹಾರ ಇಲ್ಲವಾಗಿದೆ. ಅರಣ್ಯ ಇಲಾಖೆಯಿಂದ ನಿರ್ಮಿಸಿರುವ ಆನೆಕಂದಕ, ಸೋಲಾರ್ ಬೇಲಿ ನಿರ್ವಹಣೆಯ ಕೊರತೆಯಿಂದಾಗಿ ಕೃಷಿಕರು ಕಂಗಾಲಾಗಿದ್ದು, ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿನ್ನೆ ರಾತ್ರಿ ಕೂಗೂರು ಮತ್ತು ಚಿಕ್ಕಾರ ಗ್ರಾಮದ ಗದ್ದೆಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು, ಗ್ರಾಮದ ಹೇಮಂತ್, ಗೋವಿಂದಪ್ಪ, ಕೆ.ಎಂ.ಜಯಪ್ಪ, ಚಂದ್ರ ಹಾಗೂ ಕೆ.ಆರ್.ಚಂದ್ರಪ್ಪ ಎಂಬವರುಗಳಿಗೆ ಸೇರಿದ ಗದ್ದೆಯಲ್ಲಿನ ಭತ್ತದ ಪೈರನ್ನು ತಿಂದು, ತುಳಿದು ಹಾನಿಗೊಳಿಸಿವೆ.

ಭತ್ತ ಹಣ್ಣಾಗಿ ಕೊಯ್ಲಿಗೆ ಬಂದಿದ್ದು, ರೈತರು ಕೊಯ್ಲಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಕಾಡಾನೆಗಳು ಧಾಳಿ ನಡೆಸುತ್ತಿರುವದರಿಂದ ರೈತರು ಕಂಗೆಟ್ಟಿದ್ದಾರೆ. ಮಾಲಂಬಿ, ನಿಡ್ತ ಮೀಸಲು ಅರಣ್ಯಗಳಿಂದ ರಾತ್ರಿ ಹೊತ್ತಿನಲ್ಲಿ ಗದ್ದೆಗಳಿಗೆ ಲಗ್ಗೆಯಿಡುವ ಕಾಡಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಿಸುತ್ತಿವೆ. ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಬೇಕೆಂದು ಕೃಷಿಕÀ ಹೇಮಂತ್ ಆಗ್ರಹಿಸಿದ್ದಾರೆ.

-ವಿಜಯ್