ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಹಾಗೂ ಚಿಕ್ಕಾರ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಗೆ ರೈತರ ಗದ್ದೆಗಳಲ್ಲಿ ಭತ್ತದ ಬೆಳೆಗೆ ಹಾನಿಯುಂಟಾಗಿದ್ದು, ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಗೂರು ಗ್ರಾಮದ ರೈತ ಕೆ.ಆರ್. ಚಂದ್ರಪ್ಪ ಹಾಗೂ ಚಿಕ್ಕಾರ ಗ್ರಾಮದ ರೈತ ಕೆ.ಎಂ. ಜಯಪ್ಪ ಮತ್ತಿತರ ಗದ್ದೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆಯನ್ನು ಆನೆಗಳು ತುಳಿದು ತಿಂದು ಅಪಾರ ನಷ್ಟ ಸಂಭವಿಸಿದೆ ಎಂದು ದೂರಿದ್ದಾರೆ.
ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಹಾಗೂ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.